ಡಿಸಿಸಿ ಬ್ಯಾಂಕ್ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟ

2dvk 5
Published on

ಬೆಳಗಾವಿ: ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹರ್ಕಾರಿ ಬ್ಯಾಂಕ್(ಬಿಡಿಸಿಸಿ) ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆ ಮಾಜಿ ಸಂಸದರಾದ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಗೆಲುವು ಸಾಧಿಸಿದ್ದಾರೆ.

ಬಿಡಿಸಿಸಿ ಬ್ಯಾಂಕಿನ 16 ಕ್ಷೇತ್ರಗಳ ಪೈಕಿ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 7 ಕ್ಷೇತ್ರಗಳಿಗೆ ಅ.19ರಂದು ಚುನಾವಣೆ ನಡೆದಿತ್ತು. ಆದರೆ ಬೇರೆ ಬೇರೆ ಕಾರಣಕ್ಕೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ಕ್ಷೇತ್ರಗಳ ವ್ಯಾಜ್ಯ ಕೋರ್ಟ್‌ನಲ್ಲಿತ್ತು. ಹೀಗಾಗಿ ಮತದಾನಕ್ಕೆ ಮಾತ್ರ ಕೋರ್ಟ್ ಅವಕಾಶ ನೀಡಿ, ಮತ ಎಣಿಕೆ ಮತ್ತು ಫಲಿತಾಂಶಕ್ಕೆ ತಡೆ ನೀಡಿತ್ತು. ಈಗ ಕೇಸ್ ಕ್ಲಿಯರ್ ಆಗಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶ್ರವಣ ನಾಯ್ಕ ನೇತೃತ್ವದಲ್ಲಿ ಭಾನುವಾರ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಮತ ಎಣಿಕೆಕೈಗೊಂಡು, ಫಲಿತಾಂಶ ಪ್ರಕಟಿಸಲಾಯಿತು.

ಹುಕ್ಕೇರಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ 59 ಮತ, ನಿಪ್ಪಾಣಿಯಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ 71ಮತ, ಚನ್ನಮ್ಮನ ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ 17 ಹಾಗೂ ಬೈಲಹೊಂಗದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ 54 ಮತಯತಗಳಿಂದ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ (ಕ್ರಮವಾಗಿ) ರಾಜೇಂದ್ರ ಪಾಟೀಲ 32, ಉತ್ತಮ ಪಾಟೀಲ 48, ವಿಕ್ರಮ ಇನಾಮದಾರ 15 ಹಾಗೂ ವಿಶ್ವನಾಥ ಪಾಟೀಲ 21 ಮತ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net