ಡಿಸಿಸಿ ಬ್ಯಾಂಕ್ ರಣಕಣಕ್ಕೆ ಸವದಿ, ಕಾಗೆ ಪ್ರವೇಶ

IMG_9606
Published on

ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ, ಕಾಗವಾಡ ಕ್ಷೇತ್ರದಿಂದ ರಾಜು ಕಾಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ನಮ್ಮನ್ನು ಜನ ಜೋಡೆತ್ತು ಎನ್ನುತ್ತಾರೆ. ಈ ಜೋಡೆತ್ತುಗಳು ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರವೇಶಿಸುತ್ತಿವೆ. ಯಾರೊಂದಿಗೆ ಗುರುತಿಸಿಕೊಂಡಿಲ್ಲ. ನಮ್ಮಿಬ್ಬರದ್ದೇ ಒಂದು ಬಣ. ನಮ್ಮ ಬಣಕ್ಕೆ ಬೇರೆಯವರು ಬರಬಹುದು. ಆದರೆ ನಾವು ಯಾವ ಬಣಕ್ಕೂ ಸೇರಿದುವುದಿಲ್ಲ. ಯಾರಿಗೆ ಯಾರ ಬೆಂಬಲ ಎನ್ನುವುದೆಲ್ಲವೂ ನಾಮಪತ್ರ ಹಿಂಪಡೆದ ಬಳಿಕ ಗೊತ್ತಾಗುತ್ತದೆ. ಚುನಾವಣೆಯ ಸತ್ಯ, ಅಸತ್ಯ ಅವತ್ತೇ ಹೊರ ಬರುತ್ತದೆ ಎಂದರು.

ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅನೇಕ ಇಲಾಖೆಗಳನ್ನು ನೋಡಿದ್ದೇನೆ. ಡಿಸಿಸಿ ಬ್ಯಾಂಕ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷನಾಗಿದ್ದೇನೆ. ಅಪೇಕ್ಷ ಬ್ಯಾಂಕಿಗೂ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ಅಧ್ಯಕ್ಷ ಸ್ಥಾನದ ಆಕಾಂಕ್ಷೆ ಇಲ್ಲ. ಬೇರೆಯವರಿಗೆ ಅವಕಾಶ ಕೊಡಬೇಕಿದೆ. ಸದ್ಯ ಚುನಾವಣೆ ಸ್ಪರ್ಧೆಸಿರುವ ಎಲ್ಲರೂ ನನಗೆ ಆಪ್ತರು. ಎಲ್ಲರೂ ಪ್ರೀತಿ ವಿಶ್ವಾಸದಿಂದಿದ್ದಾರೆ. ಎಲ್ಲರೂ ಅಣ್ಣತಮ್ಮಂದಿರಿದ್ದೇವೆ. ರಮೇಶ ಕತ್ತಿ ಮತ್ತು ನಾನು ನಿತ್ಯವೂ ಮಾತನಾಡುತ್ತೇವೆ. ಅದು ಆಪ್ತತೆಯ ಮಾತುಗಳಷ್ಟೆ. ಇದರಲ್ಲಿ ರಾಜಕೀಯವಿಲ್ಲ. ಇದಕ್ಕೆ ರೆಕ್ಕೆಪುಕ್ಕ ಕಟ್ಟುವ ಕೆಲಸ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net