ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದ ರಮೇಶ ಕತ್ತಿ

IMG_20251008_122141.jpg
Published on

ರಂಗೇರಿದ ಡಿಸಿಸಿ ಬ್ಯಾಂಕ್ ಚುನಾವಣೆ

ಪಿಕೆಪಿಎಸ್ ಸದಸ್ಯರ ಜತೆಗೆ ನಾಮಪತ್ರ ಸಲ್ಲಿಕೆಗೆ ಆಗಮನ

ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ರಮೇಶ ಕತ್ತಿ?
ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ರಂಗೇರಿದ್ದು, ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದ  ಮಾಜಿ ಸಂಸದ ರಮೇಶ ಕತ್ತಿ, ಬುಧವಾರ ತಮ್ಮ ತಾಲೂಕಿನ ವಿವಿಧ ಪಿಕೆಪಿಎಸ್‌ಗಳ 52 ಸದಸ್ಯರು ಹಾಗೂ ಬೆಂಬಲಿಗರ ಜತೆಗೆ ಆಗಮಿಸಿ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದ್ದು, ತಮ್ಮ ವಿರೋಧಿಗಳ ವಿರುದ್ಧ ರಮೇಶ ಕತ್ತಿ ಶಕ್ತಿ ಪ್ರದಶನಕ್ಕೆ ಮುಂದಾದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕುಟುಂಬ, ಮಾಜಿ ಸಚಿವ ಅಣ್ಣಾಸಾಹೇಬ ಜೊಲ್ಲೆ ಬಣ ಮತ್ತು ಮಾಜಿ ಸಚಿವ ಎ.ಬಿ. ಪಾಟೀಲ, ರಮೇಶ ಕತ್ತಿ ಬಣಗಳ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಕೆಲ ಸದಸ್ಯರೊಂದಿಗೆ ಬಾಲಚಂದ್ರ ಜಾರಕಿಹೊಳಿ ಸಭೆ ಮಾಡಿರುವ ಬೆನ್ನಲ್ಲಿಯೇ 52 ಸದಸ್ಯರ ಸಮೇತ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿರುವುದು ವಿರೋಧಿ ಬಣಕ್ಕೆ ತಮ್ಮ ಶಕ್ತಿ ತೋರಿಸುವ ಪ್ರಯತ್ನ ಮಾಡಿರುವರೆಂಬ ಚರ್ಚೆ ಶುರುವಾಗಿದೆ.
ಶಕ್ತಿ ಪ್ರದರ್ಶನವಲ್ಲ:
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ ಕತ್ತಿ, ನಾನು ಯಾವುದೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿಲ್ಲ. ನಮ್ಮ ತಾಲೂಕಿನ ವಿವಿಧ ಪಿಕೆಪಿಎಸ್‌ಗಳ ಸದಸ್ಯರು ಬ್ಯಾಂಕ್ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ 52 ಜನ ಸದಸ್ಯರನ್ನು ಇವತ್ತು ಕರೆದುಕೊಂಡು ಬಂದು ಇನ್ನೊಂದು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬ್ಯಾಂಕ್ ಆಡಳಿತ ಒಳ್ಳೆಯವರ ಕೈಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸಿದ್ದೇವೆ. ಸದ್ಯಕ್ಕೆ ನಾನು ಹುಕ್ಕೇರಿ ತಾಲೂಕಿನ ಜವಾಬ್ದಾರಿ ಮಾತ್ರ ತೆಗೆದುಕೊಂಡಿದ್ದೇನೆ. ಆಯಾ ತಾಲೂಕಿನಲ್ಲಿ ಅವರದೇಯಾದ ನಾಯಕರಿದ್ದಾರೆ. ಅವರೆಲ್ಲ ನೋಡಿಕೊಳ್ಳುತ್ತಾರೆ. ಒಂದು ವೇಳೆ ಯಾವುದಾದರೂ ತಾಲೂಕಿಗೆ ಕರೆದರೆ ಹೋಗಿ ಬೆಂಬಲ ನೀಡಿ ಬರುತ್ತೇನೆ ಹೊರತು. ಉಸ್ತುವಾರಿ ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕನೇರಿ ಮಠದ ಸಭೆಗೆ ಸ್ಪಷ್ಟನೆ:
ಕನೇರಿ ಮಠದಲ್ಲಿ ನಮ್ಮ ಸಮುದಾಯದ ಉಪಪಂಗಡಗಳ ಒಗ್ಗಟ್ಟಿನ ಕುರಿತಾಗಿ ಸಭೆ ನಡೆದಿದೆ ಹೊರತು ಅದರಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಅದು ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಸಭೆ. ಅದರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net