ಸಿಬ್ಬಂದಿ ಸಹಕಾರದಿಂದ ಪುನಶ್ಚೇತನ

21-klr-7
Published on

ಕೋಲಾರ: ಆರ್ಥಿಕ ನಷ್ಟದಿಂದ ರೈತರಿಗೆ ಸಾಲ ನೀಡುವ ಶಕ್ತಿ ಕಳೆದುಕೊಂಡಿದ್ದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರದಿಂದ ಪುನಶ್ಚೇತನಗೊಂಡ ಪರಿಣಾಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸಾಲ ನೀಡಲು ಸಾಧ್ಯವಾಯಿತಲ್ಲದೆ, ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರಿಗೆ 330 ಕೋಟಿ ರೂ. ಲಾಭವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುನ್ನ ಬ್ಯಾಂಕಿನಿಂದ ಒಬ್ಬ ರೈತನಿಗೂ ಸಾಲ ನೀಡಲು ಸಾಧ್ಯವಾಗಿರಲಿಲ್ಲ, ಬ್ಯಾಂಕನ್ನು ನಷ್ಟದಿಂದ ಪಾರು ಮಾಡಿದ ನಂತರ ಎರಡೂ ಜಿಲ್ಲೆಯ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಸಹಾಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಹಕಾರ ಬ್ಯಾಂಕುಗಳಿಂದ ರೈತರು ಪಡೆದಿದ್ದ 50,000 ರೂ.ವರೆಗಿನ ಸಾಲಮನ್ನಾ ಮಾಡಿ ಯೋಜನೆ ಜಾರಿಗೆ ಮಾನದಂಡ ವಿಧಿಸದ ಪರಿಣಾಮ ರೈತರಿಗೆ ಸಂಪೂರ್ಣ ಅನುಕೂಲವಾಯಿತು. ಮೈತ್ರಿ ಸರ್ಕಾರದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಘೋಷಿಸಿದ್ದರಿಂದ ಎರಡೂ ಜಿಲ್ಲೆಯ 22745 ರೈತರು ಸಾಲದಿಂದ ಮುಕ್ತಿ ಹೊಂದಿದ್ದಾರೆ ಎಂದರು.

ಒಂದೇ ಕುಟುಂಬದವರು ಒಂದಕ್ಕಿಂತ ಹೆಚ್ಚು ಸಾಲ ಪಡೆದಿರುವುದು, 1 ಲಕ್ಷ ಮೇಲ್ಪಟ್ಟ ಅಸಲು -ಬಡ್ಡಿ ಪಾವತಿಸದಿರುವುದು, ಒಬ್ಬನೇ ಸಾಲಗಾರ ಬ್ಯಾಂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳಲ್ಲಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವುದು, ಸಾಲ ಪಡೆದವರು ಸರ್ಕಾರಿ ನೌಕರರಾಗಿರುವುದು, 20000 ರೂ. ಪಿಂಚಣಿ ಪಡೆಯುತ್ತಿರುವುದು, ಸ್ವಯಂ ಘೋಷಿತ ಪ್ರಮಾಣ ಪತ್ರ ನೀಡದಿರುವುದು, ಸಾಲ ಮನ್ನಾಕ್ಕಾಗಿ ಒಂದೇ ರೇಷನ್ ಕಾರ್ಡ್ ಪಡೆದಿರುವುದು, ಪಡಿತರ ಕಾರ್ಡ್ ಹಾಗೂ ಆಧಾರಕಾರ್ಡ್ ಪಡೆಯದಿರುವುದರಿಂದ 1761 ರೈತರು ಅನರ್ಹಗೊಂಡಿದ್ದು, ಈ ರೈತರು ಸಾಲ ಮರುಪಾತಿಸುವುದು ಅನಿವಾರ್ಯ ಎಂದರು.

ಕೋಲಾರ ಜಿಲ್ಲೆಯ 10698, ಚಿಕ್ಕಬಳ್ಳಾಪುರದ 12047 ರೈತರಿಗೆ ಸಾಲ ಮನ್ನಾದಿಂದ ಪ್ರಯೋಜನವಾಗಿದೆ. ಮಾನದಂಡಗಳಡಿ ಸಾಲ ಮನ್ನಾಗೆ ಅರ್ಹತೆ ಇಲ್ಲದ ಕೋಲಾರ ಜಿಲ್ಲೆಯ 812 ಹಾಗೂ ಚಿಕ್ಕಬಳ್ಳಾಪುರದ 949 ರೈತರು ಈಗ ಪಡೆದ ಸಾಲವನ್ನು ಮರುಪಾವತಿ ಮಾಡಬೇಕು ಎಂದರು.

ಬ್ಯಾಂಕಿನ ಆಡಳಿತ ಮಂಡಳಿ ಕೈಗೊಂಡ ಸುಧಾರಣ ಕ್ರಮಗಳಿಂದಾಗಿ ರೈತರು, ಮಹಿಳೆಯರು ಹಾಗೂ ಇನ್ನಿತರ ಗ್ರಾಹಕರಿಗೆ ನಮ್ಮ ಮೇಲೆ ನಂಬಿಕೆ, ವಿಶ್ವಾಸ ಹೆಚ್ಚಿರುವುದರಿಂದ ನಾವು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವಂತಾಗಿದೆ ಎಂದರು.

ಎರಡೂ ಜಿಲ್ಲೆಗಳ ಪ್ಯಾಕ್ಸ್‌ಗಳ ಗಣಕೀಕರಣದಿಂದ ಬ್ಯಾಂಕ್ ಮತ್ತು ಪ್ಯಾಕ್ಸ್‌ಗಳ ಮೇಲೆ ನಂಬಿಕೆ ಬಲಗೊಂಡಿದೆ, ಈ ಕಾರ್ಯಕ್ಕೆ ಶ್ರಮಿಸಿದ ಎಂಡಿ ಸೇರಿ ಸಿಬ್ಬಂದಿಯನ್ನು ನ.6ರಂದು ಚಿಂತಾಮಣಿಯಲ್ಲಿ ನಡೆಯಲಿರುವ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಅಭಿನಂದಿಸಲು ತೀರ್ಮಾನಿಸಲಾಗಿದೆ ಎಂದರು.

ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ ರವಿ ಉಪಸ್ಥಿತರಿದ್ದರು.

ಸಾಲಕ್ಕೆ ಮಾತ್ರ ಬ್ಯಾಂಕಿಲ್ಲ: ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಧೋರಣೆ ಸಲ್ಲ, ಸಾಲ ಪಡೆದವರು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಟ್ಟರೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ, ಈ ಕಾರ್ಯದಲ್ಲಿ ತಾಯಂದಿರು ತೋರಿರುವ ಬದ್ಧತೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಗೋವಿಂದಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net