ಮಹಿಳೆಯರ ಖಾತೆಗೆ ಸಾಲದ ಹಣ

5-klr-9
Published on

ಕೋಲಾರ: ಡಿಸಿಸಿ ಬ್ಯಾಂಕಿನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 4.2 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದರೂ ಕೆಲವರು ಬ್ಯಾಂಕ್ ಅಭಿವೃದ್ಧಿ ಸಹಿಸದೆ ಸರ್ಕಾರಕ್ಕೆ ಅನಗತ್ಯವಾಗಿ ದೂರು ನೀಡುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಡಿಸಿಸಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಕೋಲಾರ ದಕ್ಷಿಣ ಕಸಬಾ ಎಸ್‌ಎಫ್‌ಸಿಎಸ್ ವ್ಯಾಪ್ತಿಯ ಮಹಿಳಾ ಸಂಘಗಳಿಗೆ 3 ಕೋಟಿ ರೂ. ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಂಕಿನಲ್ಲಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರವಹಿಸಲಾಗಿದೆ, ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಾಲದ ಹಣವನ್ನು ಮಹಿಳೆಯರ ಖಾತೆಗೆ ನೇರ ವರ್ಗಾಯಿಸುತ್ತಿದ್ದು, ರೂಪೇ ಕಾರ್ಡ್ ಮೂಲಕ ಹಣ ಡ್ರಾ ಮಾಡಿಕೊಳ್ಳಬಹುದು ಎಂದರು.

ಹಿಂದೆ ಬ್ಯಾಂಕ್ ದಿವಾಳಿಯಾಗಿ ಎರಡೂ ಜಿಲ್ಲೆಯ ರೈತರು, ತಾಯಂದಿರು ಸಾಲ ಸೌಲಭ್ಯ, ಸಾಲಮನ್ನಾ ಯೋಜನೆಗಳಿಂದ ವಂಚಿತರಾಗಿದ್ದಾಗ ಯಾರೂ ಮಾತನಾಡಲಿಲ್ಲ, ಇದೀಗ ದೂರು ನೀಡುತ್ತಿದ್ದು ಇಂತಹವರಿಗೆ ತಾಯಂದಿರೇ ಉತ್ತರ ನೀಡಬೇಕು ಎಂದರು.

ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಉಳಿದಿರೋದೇ ಹೆಣ್ಣು ಮಕ್ಕಳಿಂದ, ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲ ಒದಗಿಸುವ ಇಚ್ಛಾಶಕ್ತಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ, ಯಾರೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಬ್ಯಾಂಕ್ ಮಾತ್ರವಲ್ಲ ಎರಡೂ ಜಿಲ್ಲೆಗಳ ಸೊಸೈಟಿಗಳು ಜೀವ ಕಳೆದುಕೊಂಡಿದ್ದವು, ಅಂತಹ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ವಹಿಸಿಕೊಂಡು ನಮ್ಮ ಆಡಳಿತ ಮಂಡಳಿಯ ಪರಿಶ್ರಮದಿಂದ ಇಂದು ರೈತರಿಗೆ ಸಾಲ ಮನ್ನಾ ಪ್ರಯೋಜನ ಸಿಕ್ಕಿದೆ, ತಾಯಂದಿರಿಗೆ ಬಡ್ಡಿರಹಿತ ಸಾಲ ಸಿಕ್ಕಿದೆ ಎಂದರು.

ಶಾಸಕ ಕೆ.ಶ್ರೀನಿವಾಸಗೌಡ, ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ಉಪಾಧ್ಯಕ್ಷ ಅಮ್ಮೇರಹಳ್ಳಿ ಶ್ರೀನಿವಾಸಪ್ಪ, ಸಿಇಒ ವೆಂಕಟೇಶ್, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀರಾಮರೆಡ್ಡಿ, ಸೊಸೈಟಿ ನಿರ್ದೇಶಕರಾದ ಟಿ.ಶ್ರೀನಿವಾಸ್, ಮುನಿವೆಂಕಟಪ್ಪ, ಎನ್.ಪ್ರಕಾಶ್, ಕೆ.ವೆಂಕಟೇಶಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಸರೋಜಮ್ಮ ಇತರರು ಉಪಸ್ಥಿತರಿದ್ದರು.

ಕೋಲಾರ ತಾಲೂಕಿನಲ್ಲಿ 1 ಲಕ್ಷ ಹೆಣ್ಣು ಮಕ್ಕಳಿಗೆ ಶೂನ್ಯಬಡ್ಡಿ ಸಾಲ ನೀಡುವ ಗುರಿ ಹೊಂದಲಾಗಿದೆ. ಪ್ರತಿ ಮಹಿಳಾ ಸಂಘಕ್ಕೆ 5 ಲಕ್ಷದ ಬದಲಿಗೆ 10 ಲಕ್ಷ ರೂ. ನೀಡುವ ಉದ್ದೇಶವಿದ್ದು, ಇದು ಸಾಕಾರಗೊಳ್ಳಲು ಮಹಿಳೆಯರು ವೈಯಕ್ತಿಕ ಖಾತೆಯನ್ನು ಬ್ಯಾಂಕಿನಲ್ಲಿ ಮಾಡಿ ಉಳಿತಾಯದ ಹಣ ಇಲ್ಲೇ ಇಡಬೇಕು.

ಎಂ.ಎಲ್.ಅನಿಲ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net