

ಮಾಲೂರು: ರೈತರಿಗೆ ಹಾಗೂ ಮಹಿಳೆಯರಿಗೆ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಸಾಲ ಮತ್ತು ಸಹಕಾರ ನೀಡುವ ಮೂಲಕ ಬ್ಯಾಲಹಳ್ಳಿ ಗೋವಿಂದಗೌಡರು ಡಿಸಿಸಿ ಬ್ಯಾಂಕಿಗೆ ಶಕ್ತಿ ತುಂಬಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಡಿಸಿಸಿ ಬ್ಯಾಂಕ್ ಮಾಲೂರು ಶಾಖೆ ಹಾಗೂ ಟೇಕಲ್ ರೇಷ್ಮೆಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ 2.50 ಕೋಟಿ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಸಾಲ ಪಡೆದಿರುವ ಮಹಿಳೆಯರು ಹಣ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಸಾಲ ಪಡೆದವರು ಅವಧಿಗೆ ಮೊದಲು ಮರುಪಾವತಿಸಿದರೆ ಬೇರೆಯವರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಅದ್ದರಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಮಹಿಳೆಯರು ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕಿಗೆ ಬರುತ್ತಾರೆ. ವಾಣಿಜ್ಯ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುತ್ತಾರೆ. ಮಹಿಳೆಯರು ಇಚ್ಛಾಶಕ್ತಿಯಿಂದ ಖಾತೆಗಳನ್ನು ಡಿಸಿಸಿ ಬ್ಯಾಂಕಿಗೆ ವರ್ಗಾಯಿಸಿ ವ್ಯವಹಾರ ಆರಂಭಿಸಬೇಕು ಎಂದರು.
ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ, ಟೇಕಲ್ ರೇಷ್ಮೆಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ನಂಜುಂಡಪ್ಪ, ನಿರ್ದೇಶಕರಾದ ಅರುಣಾ ಶ್ರೀನಿವಾಸ್, ವೇದಾವತಿ ನಾರಾಯಣಸ್ವಾಮಿ, ಬ್ಯಾಂಕ್ ವ್ಯವಸ್ಥಾಪಕ ಯಲ್ಲಪ್ಪರೆಡ್ಡಿ, ಮೇಲ್ವೀಚಾರಕರಾದ ಕೃಷ್ಣಪ್ಪ, ಸತೀಶ್, ದ್ಯಾಪಸಂದ್ರ ರೇಷ್ಮೆ ಬೆಳಗಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಇದ್ದರು.
ಈಗಾಗಲೆ ಎರಡೂ ಜಿಲ್ಲೆಗಳಲ್ಲಿ 4 ಲಕ್ಷ ಮಹಿಳೆಯರಿಗೆ ಸಾಲ ವಿತರಿಸಲಾಗಿದೆ. ತಾಲೂಕಿನಲ್ಲಿರುವ ತಾಯಂದಿರು ಡಿಸಿಸಿ ಬ್ಯಾಂಕನ್ನು ತವರುಮನೆಯಂತೆ ಪರಿಗಣಿಸಬೇಕು. ನಾವು ನಿಮ್ಮ ಸೇವಕರು. ಬ್ಯಾಂಕ್ ಅಭಿವೃದ್ಧಿಗೆ ಸಹಕಾರ ನೀಡಬೇಕು. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ