

ಕೋಲಾರ: ಡಿಸಿಸಿ ಬ್ಯಾಂಕ್ ವಿರುದ್ಧ ಅನಗತ್ಯ ಟೀಕೆ ಬಿಟ್ಟು ಬಡವರ ಪರ ಕೆಲಸ ಮಾಡಲು ಸಲಹೆ, ಸಹಕಾರ ನೀಡುವಂತೆ ಶಾಸಕ ಕೆ.ಶ್ರೀನಿವಾಸಗೌಡ ವಿರೋಧಿಗಳಿಗೆ ಕಿವಿಮಾತು ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸಂಕಷ್ಟದಲ್ಲಿ ಇರುವಾಗ ಬೇರೆ ಯಾವುದೇ ಬ್ಯಾಂಕ್ ಬಡವರಿಗೆ ಸಾಲ ನೀಡುವ ಕೆಲಸ ಮಾಡಿಲ್ಲ. ಆದರೆ ಡಿಸಿಸಿ ಬ್ಯಾಂಕ್ ಬಡವರು, ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.
ಬ್ಯಾಂಕಿನಿಂದ ಬಡವರಿಗೆ, ಹೆಣ್ಣು ಮಕ್ಕಳಿಗೆ, ರೈತರಿಗೆ ಏನು ಆಗಬೇಕೆಂದು ಆಡಳಿತ ಮಂಡಳಿಗೆ ಸಲಹೆ, ಸೂಚನೆ ನೀಡುವ ಅಧಿಕಾರ ಸಹಕಾರಿಗಳಿಗೆ, ರಾಜಕಾರಣಿಗಳಿಗಿದೆ. ಬ್ಯಾಂಕ್ ಉಳಿದರೆ ಮಾತ್ರ ಎರಡೂ ಜಿಲ್ಲೆಯ ಬಡವರಿಗೆ ಅನುಕೂಲವಾಗುತ್ತದೆ. ಟೀಕೆಗಳಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುವುದರಿಂದ ರಚನಾತ್ಮಕ ಸಹಕಾರ ನೀಡಿ ಎಂದು ತಿಳಿಸಿದರು.
ವಾಣಿಜ್ಯ ಬ್ಯಾಂಕುಗಳಿಂದ ಬಡವರಿಗೆ ಪ್ರಯೋಜನವಾಗುತ್ತಿಲ್ಲ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ಏನಾದರೂ ಅನುಮಾನಗಳಿದ್ದರೆ ಆಡಳಿತ ಮಂಡಳಿಯವರೊಂದಿಗೆ ಕುಳಿತು ಪರಸ್ವರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶಗಳಿವೆ, ಹಾದಿ ಬೀದಿಯಲ್ಲಿ ಟೀಕೆ ಮಾಡಿದರೆ ಬ್ಯಾಂಕಿನ ಅಭಿವೃದ್ಧಿಗೆ ಧಕ್ಕೆಯಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ವರಮಹಾಲಕ್ಷ್ಮಿ ಹಬ್ಬದಂದು ಯಾರೂ ಹಣ ನೀಡುವುದಿಲ್ಲ ಎಂಬುದು ಸಂಪ್ರದಾಯ, ಆದರೆ ಡಿಸಿಸಿ ಬ್ಯಾಂಕ್ ಹಬ್ಬದ ದಿನವೇ ಒಂದು ಕೋಟಿ ರೂ. ಸಾಲವನ್ನು ಮಹಿಳೆಯರಿಗೆ ನೀಡುವ ಮೂಲಕ ಬದ್ಧತೆ ತೋರಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್, ನಾಗನಾಳ ಸೋಮಣ್ಣ,ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿಕುಮಾರ್, ನರ್ಮದಾ ಸಹಕಾರ ಸಂಘದ ಅಧ್ಯಕ್ಷ ಅರುಣಮ್ಮ, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಎಪಿಎಂಸಿ ಮಾಜಿ ಅಧ್ಯಕ್ಷ ವಡಗೂರು ರಾಮು ಇನ್ನಿತರರು ಉಪಸ್ಥಿತರಿದ್ದರು.
ಸಿಹಿ ಜತೆಗೆ ಸಾಲ: ಕಾರ್ಯಕ್ರಮದಲ್ಲಿ ಎಲ್ಲ ಮಹಿಳೆಯರಿಗೂ ತಾಂಬೂಲದ ಜತೆಗೆ ಸಿಹಿ ಹಾಗೂ ಸಾಲದ ಚೆಕ್ ವಿತರಿಸಲಾಯಿತು.
ಮಹಿಳೆಯರು ಮಹಾಲಕ್ಷ್ಮೀ ಇದ್ದಂತೆ: ಕಳೆದ 5 ವರ್ಷಗಳಲ್ಲಿ ಮಹಿಳೆಯರು ಪಡೆದಿರುವ ಸಾಲದ ಕಂತು ಪ್ರಾಮಾಣಿಕವಾಗಿ ಮರು ಪಾವತಿಯಾಗುತ್ತಿದೆ, ಮಹಿಳೆಯರಿಂದಲೇ ಬ್ಯಾಂಕ್ ಪ್ರಗತಿ ಸಾಧಿಸುತ್ತಿರುವುದರಿಂದ ಬ್ಯಾಂಕಿಗೆ ಮಹಿಳೆಯರು ಮಹಾಲಕ್ಷ್ಮೀ ಇದ್ದಂತೆ ಎಂದು ಗೋವಿಂದಗೌಡ ಹೇಳಿದರು.