ಸರ್ಕಾರದ ಆದೇಶ ಅಮಾನವೀಯ

29-klr-4
Published on

ಕೋಲಾರ: ಸಹಕಾರಿ ಬ್ಯಾಂಕುಗಳಿಂದ ಶೂನ್ಯಬಡ್ಡಿ ಸಾಲ ಪಡೆದ ರೈತರು, ಮಹಿಳಾ ಸಂಘಗಳು ಆ.30ರೊಳಗೆ ಬಾಕಿ ಇರುವ ಕಂತು ಪಾವತಿಸಿದರೆ ಮಾತ್ರವೇ ಸರ್ಕಾರದಿಂದ ಬಡ್ಡಿಹಣ ಬಿಡುಗಡೆ ಮಾಡುವುದಾಗಿ ನೀಡಿರುವ ಆದೇಶ ವಾಪಸ್ ಪಡೆಯಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಆಗ್ರಹಿಸಿದರು.

ತಾಲೂಕಿನ ಹೋಳೂರಿನಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ನಿಂದ ಹೋಳೂರು ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ 18 ಮಹಿಳಾ ಸಂಘಗಳಿಗೆ 89.28 ಲಕ್ಷ ರೂ. ಸಾಲ ವಿತರಿಸಿ ಮಾತನಾಡಿ, ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಆರ್‌ಬಿಐ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲದ ಕಂತುಗಳ ಪಾವತಿಗೆ ಒಟ್ಟು 6 ತಿಂಗಳ ಕಾಲ ವಿನಾಯಿತಿ ನೀಡಿತ್ತು. ಆದರೆ ಕರೊನಾ ಸಂಕಷ್ಟ ಮುಂದುವರಿದಿರುವಾಗಲೇ ತಾನೇ ಮಾಡಿದ್ದ ಆದೇಶ ಧಿಕ್ಕರಿಸಿ ಬಾಕಿ ಈವರೆಗಿನ ಎಲ್ಲ ಕಂತುಗಳನ್ನು ಆ.30ರೊಳಗೆ ಪಾವತಿಸಿದರೆ ಮಾತ್ರ ಸಾಲದ ಬಡ್ಡಿ ಮನ್ನಾ ಮೊತ್ತವನ್ನು ಸಂಬಂಧಿಸಿದ ಸಹಕಾರಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲು ನೀಡಿರುವ ಆದೇಶ ಅಮಾನವೀಯವಾಗಿದೆ ಎಂದು ಟೀಕಿಸಿದರು.

ಸರ್ಕಾರದ ಈ ಆದೇಶದಿಂದ ಶೂನ್ಯಬಡ್ಡಿ ಸಾಲ ಪಡೆದ ಮಹಿಳೆಯರು, ರೈತರು ಹಾಗೂ ಸಹಕಾರ ಬ್ಯಾಂಕುಗಳು ಕಷ್ಟಕ್ಕೆ ಸಿಲುಕಲಿದ್ದು, ಈ ಕುರಿತು ಸಂಬಂಧಿಸಿದ ಸಚಿವರು ಮತ್ತು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ತಾಯಂದಿರಿಗೆ ನೀಡುತ್ತಿರುವ 50,000 ರೂ. ಬಡ್ಡಿರಹಿತ ಸಾಲದ ಮೊತ್ತವನ್ನು 1 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು, ದುಡಿಯುವ ಕೈಗಳಿಗೆ ಸಾಲ ಸಿಕ್ಕರೆ ಆರ್ಥಿಕ ಚೇತರಿಕೆ ಸಾಧ್ಯ ಎಂದರು.

ಕೆಸಿ ವ್ಯಾಲಿ ನೀರನ್ನು ಮುಂದಿನ ವರ್ಷದ ಗಣೇಶ ಹಬ್ಬದ ವೇಳೆಗೆ ಈ ಭಾಗದ ಎಲ್ಲ ಕೆರೆಗಳಿಗೂ ತುಂಬಿಸಲಾಗುವುದು. ಇದರಿಂದ ಕುಡಿಯುವ ನೀರು, ಕೃಷಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ, ಜನ ಹಳ್ಳಿ ಬಿಟ್ಟು ಬೆಂಗಳೂರಿಗೆ ಹೋಗುವುದಿಲ್ಲ, ಹಳ್ಳಿಗಳಿಗೆ ಪುನಾ ವೈಭವ ಬರುತ್ತದೆ ಎಂದು ಆಶಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಆರ್‌ಬಿಐ ಮತ್ತು ಸರ್ಕಾರವೇ ಸಾಲದ ಕಂತು ಪಾವತಿ ಅವಧಿ 6 ತಿಂಗಳು ಮುಂದೂಡಿ, ಈಗ ಪಾವತಿಸಿದರೆ ಮಾತ್ರವೇ ಬಡ್ಡಿಮನ್ನಾ ಹಣ ನೀಡುವುದಾಗಿ ಹೇಳುತ್ತಿರುವುದು ವಿಪರ್ಯಾಸ ಎಂದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ. ಬ್ಯಾಟಪ್ಪ,ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಎಸ್‌ಎಫ್‌ಸಿಎಸ್ ಅಧ್ಯಕ್ಷ ಎಚ್.ವಿ.ನಾರಾಯಣಸ್ವಾಮಿ, ಸಿಇಒ ನಾರಾಯಣರೆಡ್ಡಿ, ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜು, ಸೊಸೈಟಿ ನಿರ್ದೇಶಕರಾದ ವಿ.ಮುನೇಗೌಡ, ಶ್ರೀನಿವಾಸರೆಡ್ಡಿ, ಡಿ.ವಿ.ನಂಜುಂಡಗೌಡ, ಗೋಪಾಲಕೃಷ್ಣ, ಲಕ್ಷ್ಮಿದೇವಮ್ಮ, ಚೌಡಮ್ಮ, ವೆಂಕಟೇಶಪ್ಪ, ಲಕ್ಷ್ಮೀನಾರಾಯಣಪ್ಪ, ರಾಮಚಂದ್ರಪ್ಪ, ಸಿ.ಎಂ.ವೆಂಕಟಮುನಿಯಪ್ಪ ಹಾಜರಿದ್ದರು.

ಟೀಕೆಗೆ ಹೆದರುವುದಿಲ್ಲ: ವೈಯಕ್ತಿಕ ಟೀಕೆಗಳಿಗೆ ಹೆದರುವುದಿಲ್ಲ. ಮಹಿಳೆಯರಿಗೆ, ರೈತರಿಗೆ ಆರ್ಥಿಕ ಶಕ್ತಿ ತುಂಬಲು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ, ಕರೊನಾ ಸಂಕಷ್ಟದಲ್ಲೂ ಸಾಲ ವಿತರಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದೇವೆ, ಜನರಿಗೆ ನೆರವಾಗುವುದು ಬ್ಯಾಂಕಿನ ಸಂಕಲ್ಪ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net