

ಕೋಲಾರ: ಜಿಲ್ಲೆಯ ಎಲ್ಲ 191 ಕೃಷಿ ಪತ್ತಿನ ಸಹಕಾರ ಸಂಘಗಳು (ಫ್ಯಾಕ್ಸ್)ಜು.25 ರೊಳಗೆ ಆನ್‌ಲೈನ್ ವಹಿವಾಟು ಆರಂಭಿಸಲು ಗಣಕೀಕರಣದೊಂದಿಗೆ ಸಜ್ಜಾಗಬೇಕು, ಈ ಕಾರ್ಯಕ್ಕೆ ವಿ-ಸಾಫ್ಟ್ ಕಂಪನಿ ಸಹಕಾರ ನೀಡುತ್ತಿದ್ದು, ಆಗಸ್ಟ್‌ನಲ್ಲಿ ಸೊಸೈಟಿಗಳಲ್ಲಿ ವಹಿವಾಟು, ಪಾಸ್‌ಬುಕ್ ಮುದ್ರಣಕ್ಕೆ ಚಾಲನೆ ಸಿಗಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಕೃಷಿಪತ್ತಿನ ಸಹಕಾರ ಸಂಘಗಳ ಸಿಇಒಗಳು ಹಾಗೂ ಗಣಕಯಂತ್ರ ಸಹಾಯಕರ ಸಭೆಯಲ್ಲಿ ಫ್ಯಾಕ್ಸ್‌ಗಳ ಗಣಕೀಕರಣದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಹಾಗೂ ಮೈಕ್ರೋ ಎಟಿಎಂ ಬಳಕೆ ವಿಚಾರದಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಿಂದ ಬ್ಯಾಂಕಿನ ಮೇಲೆ ಜನರಿಗೆ ನಂಬಿಕೆ ಬರುವಂತಾಗಿದೆ, ಆನ್‌ಲೈನ್ ಮತ್ತು ಮೈಕ್ರೋ ಎಟಿಎಂನಿಂದ ಸೊಸೈಟಿಗಳಿಗೆ ಸಾಲ, ಉಳಿತಾಯದ ಹಣ ಪಾವತಿಸುವ ತಾಯಂದಿರ ಹಣಕ್ಕೆ ಭದ್ರತೆ, ಪಾರದರ್ಶಕತೆಗೆ ಅವಕಾಶವಾಗಲಿದೆ ಎಂದರು.
ನಬಾರ್ಡ್‌ನ ಶೇ.90 ಸಹಾಯಧನದೊಂದಿಗೆ ಜಿಲ್ಲೆಯ ಎಲ್ಲ ಕೃಷಿಪತ್ತಿನ ಸಹಕಾರ ಸಂಘಗಳಿಗೆ 200 ಮೈಕ್ರೋ ಎಟಿಎಂ ನೀಡಲಾಗುತ್ತಿದೆ. ಈಗಾಗಲೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಟಿಐ) ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದರು.
ಬ್ಯಾಂಕಿನ ಎಜಿಎಂ ಶಿವಕುಮಾರ್ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಫೆಕ್ಸ್ ಬ್ಯಾಂಕ್ ಈಗಾಗಲೆ 100 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ, ಉಳಿದ ಸೊಸೈಟಿಗಳಿಗೂ ಕೊಡುವ ಭರವಸೆ ನೀಡಿದೆ. ಆನ್‌ಲೈನ್ ವಹಿವಾಟಿಗೆ ಅಗತ್ಯವಾದ ಪ್ರಿಂಟರ್‌ಗಳನ್ನು ಸೊಸೈಟಿಗಳು ಖರೀದಿಸಿರುವುದನ್ನು ಖಚಿತಪಡಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ವಿ-ಸಾಫ್ಟ್ ಕಂಪನಿಯ ನಾಗೇಶ್ ಹಾಗೂ ಫ್ಯಾಕ್ಸ್‌ಗಳ ಸಿಇಒಗಳು ಉಪಸ್ಥಿತರಿದ್ದರು.