

ಕೋಲಾರ/ನರಸಾಪುರ: ಡಿಸಿಸಿ ಬ್ಯಾಂಕ್ ವಿರುದ್ಧ ಟೀಕೆ ಮಾಡುವವರು ಯಾರೇ ಆಗಲಿ, ದಾಖಲೆಗಳಿದ್ದರೆ ಜಿಲ್ಲೆಯ ಹಿರಿಯ ಶಾಸಕರಾದ ಕೆ.ಆರ್.ರಮೇಶ್‌ಕುಮಾರ್ ಹಾಗೂ ಕೆ.ಶ್ರೀನಿವಾಸಗೌಡರ ಮುಂದೆ ಆರೋಪ ಸಾಬೀತು ಮಾಡಿದಲ್ಲಿ ಇಡೀ ಆಡಳಿತ ಮಂಡಳಿ ತಲೆ ಬಾಗಲು ಸಿದ್ಧ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಸಂಸದ ಎಸ್.ಮುನಿಸ್ವಾಮಿ ಹೆಸರು ಹೇಳದೆ ಪರೋಕ್ಷವಾಗಿ ಸವಾಲೆಸೆದರು.
ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ನರಸಾಪುರ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿಸಿಸಿ ಬ್ಯಾಂಕ್‌ನಿಂದ 91 ಮಹಿಳಾ ಸಂಘಗಳಿಗೆ 4.18 ಕೋಟಿ ರೂ. ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ,
ಡಿಸಿಸಿ ಬ್ಯಾಂಕ್ ಇತಿಹಾಸ, 10 ವರ್ಷಗಳ ಹಿಂದೆ ಬ್ಯಾಂಕಿನ ಸ್ಥಿತಿಗತಿ ಹೇಗಿತ್ತು ಎಂಬುದನ್ನು ಅರಿಯದ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ತಾಯಂದಿರಿಗೆ ಸಾಲ ನೀಡುವಾಗ ಪಕ್ಷ, ಜಾತಿ ಆಧಾರಿತವಾಗಿ ಸಾಲ ನೀಡಿದ್ದರೆ ಜಿಲ್ಲೆಯ ಹಿರಿಯ ನಾಯಕರ ಸಮ್ಮುಖದಲ್ಲೇ ದಾಖಲೆ ಸಾಬೀತುಪಡಿಸಲಿ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಸಾಲ ವಿತರಿಸಿ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾವಿರಾರು ಕೋಟಿ ರೂ. ಸಾಲ ನೀಡಿರುವ ಡಿಸಿಸಿ ಬ್ಯಾಂಕಿಗೆ ತಾಯಂದಿರ ಪ್ರಾಮಾಣಿಕತೆ, ನಂಬಿಕೆ, ಆಶೀರ್ವಾದವೇ ಜೀವಾಳವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ನಾವು ಜಾತಿ, ಪಕ್ಷ ನೋಡದೆ ಸಾಲ ವಿತರಿಸಿದ್ದೇವೆ, ಆರೋಪ ಮಾಡುವವರಲ್ಲಿ ಸಾಮಾನ್ಯ ತಿಳಿವಳಿಕೆ ಇರಬೇಕು. ಮಹಿಳೆಯರಿಂದಲೇ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ, ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲಿಟ್ಟು, ಪ್ರಾಮಾಣಿಕತೆ ತೋರಿದರೆ ತಾಯಂದಿರಿಗೆ 1 ಲಕ್ಷ ರೂ. ಬಡ್ಡಿರಹಿತ ಸಾಲ ವಿತರಿಸುವ ನನ್ನ ಆಶಯ ಈಡೇರಿಸಲು ಬದ್ಧನಾಗಿರುವೆ ಎಂದರು.
ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸಹಕಾರ ರಂಗದಿಂದ ಮಾತ್ರವೇ ಬಡವರಿಗೆ ನೆರವು ಒದಗಿಸಲು ಸಾಧ್ಯ, ನರಸಾಪುರ ಸೊಸೈಟಿ ಒಂದರಿಂದಲೇ 32 ಕೋಟಿ ರೂ. ಸಾಲ ನೀಡಿ, ಸಹಕಾರಿ ಕ್ಷೇತ್ರದ ಮಹತ್ವವನ್ನು ಸಮಾಜಕ್ಕೆ ತೋರಿಸಿದ್ದೇವೆ ಎಂದರು.
ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೆ.ಎಂ.ಮುನಿರಾಜು, ಉಪಾಧ್ಯಕ್ಷ ವಾಸುದೇವ್, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಕೆಇಬಿ ಚಂದ್ರಣ್ಣ, ಮೋಹನ್, ಈರಣ್ಣ, ಚೆನ್ನರಾಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಸರೋಜಮ್ಮ, ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ತಾಪಂ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದರು.
ಬಾಯಿಗೆ ಬಂದಂತೆ ಟೀಕೆ ತಪ್ಪು: ಜಿಲ್ಲೆಯ ರೈತರು, ಮಹಿಳೆಯರಿಗೆ ಒಂದು ರೂಪಾಯಿ ಆರ್ಥಿಕ ನೆರವು ನೀಡುವ ಶಕ್ತಿ ಕಳೆದುಕೊಂಡಿದ್ದ ಡಿಸಿಸಿ ಬ್ಯಾಂಕಿಗೆ ಬ್ಯಾಲಹಳ್ಳಿ ಗೋವಿಂದಗೌಡರು ಎಲ್ಲರ ಸಹಕಾರದೊಂದಿಗೆ ಶಕ್ತಿ ತುಂಬಿದ್ದಾರೆ, ಎರಡೂ ಜಿಲ್ಲೆಯಲ್ಲಿ 1200 ಕೋಟಿ ರೂ. ಸಾಲ ನೀಡಲಾಗಿದೆ, ಅಪೆಕ್ಸ್ ಮತ್ತು ನಬಾರ್ಡ್ ಅಧಿಕಾರಿಗಳು ಬ್ಯಾಂಕಿನ ಪ್ರಗತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೆ ಬಾಯಿ ಚಪಲಕ್ಕೆ ಟೀಕೆ ಮಾಡುವುದು ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ ಎಂದು ಅನಿಲ್‌ಕುಮಾರ್ ಸಂಸದರ ವಿರುದ್ಧ ಹರಿಹಾಯ್ದರು.