ತಾಯಂದಿರಿಗೆ ಡಿಸಿಸಿ ಬ್ಯಾಂಕ್ ದಾರಿದೀಪ

1 tek 1
Published on

ಮಾಸ್ತಿ: ಗ್ರಾಮೀಣ ಭಾಗದಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಸಹಕಾರಿಯಾಗಲೆಂದು ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಸಂಘಗಳಡಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಯೋಜನೆ ರೂಪಿಸಿದ್ದು, ಇದು ತಾಯಂದಿರಿಗೆ ದಾರಿದೀಪವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ತೊರಲಕ್ಕಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಡಿಸಿಸಿ ಬ್ಯಾಂಕ್‌ನಿಂದ ನೂಟುವೆ ಹಾಗೂ ಹಸಾಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಹಾಗೂ ರೈತರಿಗೆ 3.87 ಕೋಟಿ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿದರು.

ಸಾಲ ಪಡೆದ ಸಂಘದ ಸದಸ್ಯರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಗ್ರಾಮೀಣ ಭಾಗದಲ್ಲಿ ಖಾಸಗಿ ಸಾಲಕ್ಕೆ ಕಡಿವಾಣ ಹಾಕಲೆಂದು ತಾಯಂದಿರಿಗೆ ಸಾಲ ನೀಡಲಾಗುತ್ತಿದ್ದು. ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ ಎಂದರು.

ಮಾಲೂರು ತಾಲೂಕಿನಲ್ಲಿ ಶಾಸಕರ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರ ಸಹಕಾರದಿಂದ ಮುಂದಿನ ದಿನಗಳಲ್ಲಿ 1 ಲಕ್ಷ ಮಹಿಳೆಯರಿಗೆ ಸಾಲ ಯೋಜನೆ ನೀಡಲಾಗುವುದು ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದರಿಂದ ಮತ್ತಷ್ಟು ಜನರಿಗೆ ಸಹಕಾರಿಯಾಗುತ್ತದೆ. ವಾಣಿಜ್ಯ ಬ್ಯಾಂಕ್‌ಗಳು ನಮ್ಮ ದುಡ್ಡಿಗೆ ಬಡ್ಡಿ ಹಾಕಿ ಸಾಲ ನೀಡುತ್ತಿವೆ. ಆದರೆ ಡಿಸಿಸಿ ಬ್ಯಾಂಕ್ ಯಾವುದೇ ಬಡ್ಡಿ ಇಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಎಂದರು.

ಬ್ಯಾಲಹಳ್ಳಿ ಗೋವಿಂದಗೌಡ, ಕೆ.ವೈ.ನಂಜೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ ಅವರನ್ನು ಅಭಿನಂದಿಸಲಾಯಿತು.

ನೂಟುವೆ ಸೊಸೈಟಿ ಅಧ್ಯಕ್ಷ ರಾಜಣ್ಣ , ಹಸಾಂಡಹಳ್ಳಿ ಸೊಸೈಟಿ ಅಧ್ಯಕ್ಷ ಚನ್ನರಾಯಪ್ಪ, ಮುಖಂಡರಾದ ನಂಜುಂಡಪ್ಪ, ಹಿನಾಯತ್, ರಹಬರ್‌ಸಾಬ್, ಹನುಮಪ್ಪ, ಈರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net