

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಕೃಷಿ ಪತ್ತಿನ ಸಹಕಾರ ಸಂಘ (ಫ್ಯಾಕ್ಸ್)ಗಳ ಗಣಕೀಕರಣ ಮುಗಿಸಿ ಜು.9ರಂದು ಆನ್‌ಲೈನ್ ವಹಿವಾಟಿಗೆ ಚಾಲನೆ ನೀಡಲಾಗುವುದು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ ಈಗಾಗಲೆ ಒಟ್ಟು 25 ಫ್ಯಾಕ್ಸ್‌ಗಳ ಗಣಕೀಕರಣ ಮುಗಿದಿದೆ, ಜುಲೈ 8ರೊಳಗೆ ಕಾರ್ಯ ಪೂರ್ಣಗೊಳಿಸಿ 9ರಿಂದ ಆನ್‌ಲೈನ್ ವಹಿವಾಟಿಗೆ ಚಾಲನೆ ನೀಡಲಾಗುವುದು. ಅಂದೇ ಅೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡರ ಅನುದಾನದಲ್ಲಿ 100 ಕಂಪ್ಯೂಟರ್‌ಗಳನ್ನು ಫ್ಯಾಕ್ಸ್‌ಗಳಿಗೆ ವಿತರಿಸಲಾಗುವುದು. ಜುಲೈ ಅಂತ್ಯದೊಳಗೆ ಎರಡೂ ಜಿಲ್ಲೆಗಳ ಎಲ್ಲ 190 ಫ್ಯಾಕ್ಸ್‌ಗಳ ಗಣಕೀಕರಣ ಹಾಗೂ ಲೆಕ್ಕಪರಿಶೋಧನೆ ಮುಗಿಸಲಾಗುವುದು ಎಂದರು.
750 ಕೋಟಿ ಠೇವಣಿ ಗುರಿ: ಬ್ಯಾಂಕಿನ ಸಾಲ ವಿತರಣಾ ವ್ಯವಸ್ಥೆ ಸುಧಾರಣೆ, ಆಂತರಿಕ ಸೋರಿಕೆ ತಡೆಗಟ್ಟುವ ಸಂಬಂಧ ನಬಾರ್ಡ್ ಎಜಿಎಂ ನೀಡಿದ ಸಲಹೆ ಸ್ವೀಕರಿಸಿದ ಬ್ಯಾಲಹಳ್ಳಿ ಗೋವಿಂದಗೌಡ, ಜುಲೈ ಅಂತ್ಯದೊಳಗೆ 200 ಕೋಟಿ ರೂ. ಹಾಗೂ ವರ್ಷಾಂತ್ಯಕ್ಕೆ 750 ಕೋಟಿ ರೂ.ಗಳ ಠೇವಣಿ ಸಂಗ್ರಹದ ಗುರಿ, ಬ್ಯಾಂಕಿನ ಎನ್‌ಪಿಎ ಶೇ.1.5ಕ್ಕೆ ಇಳಿಸುವುದು, ಕನಿಷ್ಠ 10 ಹೊಸ ಶಾಖೆ ತೆರೆಯಲಾಗುವುದು ಎಂದು ಪ್ರಕಟಿಸಿದರು.
ನಂ.1 ಬ್ಯಾಂಕ್: ನಬಾರ್ಡ್ ಎಜಿಎಂ ನಟರಾಜನ್ ಮಾತನಾಡಿ, ಡಿಸಿಸಿ ಬ್ಯಾಂಕ್ ಅವಸಾನದಿಂದ ಉನ್ನತಿಯತ್ತ ಸಾಗಿ ನಬಾರ್ಡ್ ಯಶೋಗಾಥೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ರಾಜ್ಯದ ಮೊದಲ ಬ್ಯಾಂಕ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರಲ್ಲದೆ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಋಣಾತ್ಮಕ ಕ್ರಮಾಂಕ ಹೊಂದಿದ್ದ ಬ್ಯಾಂಕ್ ಇಂದು 108 ಕೋಟಿ ರೂ. ಧನಾತ್ಮಕ ಕ್ರಮಾಂಕದತ್ತ ಮುನ್ನಡೆದಿದೆ ಎಂದರು.
ರೈತರು ಸಂಕಷ್ಟದಲ್ಲಿದ್ದು, ಹೈನುಗಾರಿಕೆಯಲ್ಲಿ ತೊಡಗಿದ ರೈತರಿಗೆ ಬ್ಯಾಂಕ್ ಬೆಳೆ ಕೆಸಿಸಿ ಸಾಲ ನೀಡಿದಲ್ಲಿ 16 ಸಾವಿರ ರೂ. ನಿರ್ವಹಣಾ ವೆಚ್ಚವನ್ನು ಅವರು ಸಹಕಾರ ಸಂಘಕ್ಕೆ ಹಾಲು ಹಾಕುತ್ತಿರುವ ದಾಖಲೆ ಆಧಾರದ ಮೇಲೆ ನೀಡಬಹುದು. ತೋಟಗಾರಿಕಾ ಬೆಳೆಗಳಿಗೆ ಸಾಲ ನೀಡಲು ಒತ್ತು ನೀಡಬೇಕು, ಬೆಳೆಗಳ ನಿರ್ವಹಣೆಗೂ 16,000 ರೂ. ನಿರ್ವಹಣಾ ವೆಚ್ಚ ನೀಡಲು ಅವಕಾಶವಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ನಾಗೇಶ್, ಚಿಕ್ಕಬಳ್ಳಾಪುರ ಜಿಲ್ಲೆ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕಿ ಭಾವನಾ, ಕೋಲಾರ ಉಪನಿರ್ದೇಶಕಿ ಶಾಂತಕುಮಾರಿ, ಸಹಾಯಕ ನಿರ್ದೇಶಕರಾದ ವೆಂಕಟೇಶ್, ಸುಬ್ರಮಣಿ ಉಪಸ್ಥಿತರಿದ್ದರು.
ಖಾಸಗಿ ಲೆಕ್ಕಪರಿಶೋಧನೆ ಬೇಡ: ಸೊಸೈಟಿಗಳ ಲೆಕ್ಕಪರಿಶೋಧನೆಯನ್ನು ಖಾಸಗಿ ಸಂಸ್ಥೆಗಳಿಂದ ಮಾಡಿಸದಿರಿ, ಬ್ಯಾಂಕ್ ಅಧಿಕಾರಿಗಳೇ ಮಾಡಲಿ. ಫ್ಯಾಕ್ಸ್‌ಗಳು ಸಾಲ ವಿತರಿಸುವ ಜತೆಗೆ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ನೀಡಬೇಕು. ಸಿಬ್ಬಂದಿ ಅಂದಿನ ಕೆಲಸವನ್ನು ಅಂದೇ ಮಾಡಬೇಕು ಎಂದು ನಟರಾಜನ್ ಹೇಳಿದರು.