

ಕೋಲಾರ: ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಪಡೆದಿರುವ ಸಾಲದ ಕಂತನ್ನು ಸಕಾಲಕ್ಕೆ ಮರುಪಾವತಿಸದರಷ್ಟೇ ಶೂನ್ಯ ಬಡ್ಡಿ ಯೋಜನೆಯ ಪ್ರಯೋಜನ, ಇಲ್ಲವಾದಲ್ಲಿ ಬಡ್ಡಿಯ ಹೊರೆ ಬೀಳುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶನಿವಾರ ತಾಲೂಕಿನ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ವ್ಯಾಪ್ತಿಯಲ್ಲಿನ ರೈತರಿಗೆ 98.70 ಲಕ್ಷ ರೂ. ಬೆಳೆ ಸಾಲ ವಿತರಿಸಿ ಮಾತನಾಡಿ, ರೈತರಿಗೆ 3 ಲಕ್ಷ ರೂ. ಹಾಗೂ ಮಹಿಳಾ ಸಂಘಗಳಿಗೆ 5 ಲಕ್ಷ ರೂ. ವರೆಗೆ ಶೂನ್ಯಬಡ್ಡಿ ಸಾಲ. ಕುರಿ, ಕೋಳಿ, ರೇಷ್ಮೆ ಹುಳು ಸಾಕಾಣಿಕೆಗೆ ಶೇ.3ರ ಬಡ್ಡಿಗೆ ಮಧ್ಯಮಾವಧಿ ಸಾಲ ನೀಡಲಾಗುತ್ತಿದೆ. ಫಲಾನುಭವಿಗಳು ಸಕಾಲಕ್ಕೆ ಸಾಲ ಪಾವತಿಸದಿದ್ದಲ್ಲಿ ಬಡ್ಡಿಯ ಹೊರೆ ಬೀಳುತ್ತದೆ ಎಂದು ಎಚ್ಚರಿಸಿದರು.
ಸಕಾಲಕ್ಕೆ ಸಾಲ ಮರುಪಾವತಿಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಡ್ಡಿ ಯೋಜನೆಗಳ ಪ್ರೋತ್ಸಾಹಧನ ಸಿಗುತ್ತದೆ. ಸಾಲ ಮನ್ನಾ ವದಂತಿಗಳಿಗೆ ಕಿವಿಗೊಡಬೇಡಿ. ಕರೊನಾ ಹಿನ್ನೆಲೆಯಲ್ಲಿ ಕಂತು ಪಾವತಿಗೆ ನೀಡಿರುವ ಕಾಲಾವಕಾಶದಿಂದ ಬಡ್ಡಿ ಹೊರೆ ಬೀಳುತ್ತದೆ ಎಂಬ ಸತ್ಯ ಅರಿತು ಆಯಾ ತಿಂಗಳ ಕಂತನ್ನು ಮರುಪಾವತಿಸಿ ಎಂದು ರೈತರು, ಮಹಿಳಾ ಸಂಘಗಳ ಸದಸ್ಯರಲ್ಲಿ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್‌ನಲ್ಲಿ ಇದ್ದ 15 ಕೋಟಿ ಠೇವಣಿ ಹಣ ಈಗ 300 ಕೋಟಿಗೆ ಏರಿಕೆಯಾಗಲು ಬಡವರು, ರೈತರು, ತಾಯಂದಿರೇ ಕಾರಣ. ಡಿಸಿಸಿ ಬ್ಯಾಂಕ್ ಪ್ರತಿ ಕುಟುಂಬಕ್ಕೂ ಸಾಲ ನೀಡುವ ಬದ್ಧತೆ ಹೊಂದಿದೆ, ರೈತರು, ಮಹಿಳೆಯರು, ಹಾಲು ಉತ್ಪಾದಕರು ಇತರ ಬ್ಯಾಂಕುಗಳಲ್ಲಿರುವ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿಗೆ ವರ್ಗಾಯಿಸಿ, ನಿಮ್ಮದೇ ಬ್ಯಾಂಕನ್ನು ಬೆಳೆಸಿ ಎಂದು ಕೋರಿದರು.
ಬ್ಯಾಂಕಿನ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಸೊಸೈಟಿಗಳು ಆರ್ಥಿಕವಾಗಿ ಬಲಗೊಂಡಿದ್ದು, ರೈತರು, ತಾಯಂದಿರ ಬದುಕಿಗೆ ಆಸರೆಯಗಿದೆ. ಲಾಭದತ್ತ ಸಾಗಿರುವ ಸೊಸೈಟಿಗಳಲ್ಲಿ ಪಾರದರ್ಶಕತೆ ಕಾಪಾಡಲು ಗಣಕೀಕರಣಕ್ಕೆ ಒತ್ತು ನೀಡಿದ್ದೇವೆ ಎಂದರು.
ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ, ನಿರ್ದೇಶಕರಾದ ಮುನೇಗೌಡ, ಮಾರ್ಜೇನಹಳ್ಳಿ ಸುಬ್ರಹ್ಮಣಿ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಮೇಲ್ವಿಚಾರಕ ಅಮೀನಾ, ಸೊಸೈಟಿ ಮಾಜಿ ನಿರ್ದೇಶಕ ಚಂದ್ರಶೇಖರ್ ಇದ್ದರು.