ಸಮರ್ಪಕವಾಗಿ ಕೆಲಸ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ

23-klr-1
Published on

ಕೋಲಾರ: ಬುದ್ಧಿ ಇದ್ದರೆ ಸಾಲದು, ಕೆಲಸದಲ್ಲಿ ಬದ್ಧತೆಯೂ ಮುಖ್ಯ, ಸಮರ್ಪಕವಾಗಿ ಕೆಲಸ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಪ್ರಾಮಾಣಿಕರಿಂದ ಕೆಲಸ ಮಾಡಿಸಿಕೊಳ್ಳುವುದು ನನಗೆ ಗೊತ್ತು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರೈತರು ಮತ್ತು ಮಹಿಳೆಯರ ಹಣದಲ್ಲಿ ಪ್ರತಿ ತಿಂಗಳ ಸಂಬಳದ ಜತೆಗೆ 3 ಲಕ್ಷ ರೂ. ವಿಮಾ ಸೌಲಭ್ಯ ಕಲ್ಪಿಸಿದ್ದರೂ ಕಳಪೆ ಸಾಧನೆ ತೋರುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫೀಲ್ಡ್ ವಿಸಿಟ್ ಮಾಡಿ: ಕರೊನಾದಿಂದ ರೈತರ ಸ್ಥಿತಿ ಶೋಚನೀಯವಾಗಿದೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಸಿಗದೆ ಮೀಟರ್ ಬಡ್ಡಿ ದಂಧೆಕೋರರ ಬಳಿ ಹೋಗುವಂತಾಗಿದೆ. ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಬ್ಯಾಂಕಿಗೆ ತಡವಾಗಿ ಬರುವುದು, ಸ್ಥಳ ಭೇಟಿ ಮಾಡದೆ ಕಚೇರಿಯಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಲ ವಸೂಲಿಗೆ ದರ್ಪ ಸಲ್ಲದು: ಕೆಲ ಶಾಖೆಗಳಲ್ಲಿ ಬೆಳೆ ಸಾಲಕ್ಕಾಗಿ ಆಸ್ತಿ ಅಡಮಾನಕ್ಕೆ ರೈತರು ಸಿದ್ಧರಿದ್ದರೂ ಕಡತ ವಿಲೇವಾರಿ ವಿಳಂಬಕ್ಕೆ ಆಕ್ಷೇಪಿಸಿದರಲ್ಲದೆ ಕೂಡಲೇ ಕಡತಗಳನ್ನು ಕೇಂದ್ರ ಶಾಖೆಗೆ ಕಳುಹಿಸುವಂತೆ ತಾಕೀತು ಮಾಡಿದರು.

ಸಾಲ ವಸೂಲಿಗೆ ಕರೊನಾ ಅಡ್ಡಿಯಾಗಿದೆ. ಆರ್‌ಬಿಐ ಸೂಚನೆ ಜತೆಗೆ ಬ್ಯಾಂಕಿನ ಹಿತದೃಷ್ಟಿಯಿಂದ ಸಾಲ ವಸೂಲಾತಿಗೆ ಗಮನ ನೀಡಬೇಕು. ಸಾಲಗಾರರ ಬಳಿ ಹೋದಾಗ ದರ್ಪ ತೋರಿಸಬಾರದು, ನೋಟಿಸ್ ನೀಡುವ ನೆಪದಲ್ಲಿ ಕಿರಕುಳ ನೀಡದೆ ಸೌಜನ್ಯದಿಂದ ವರ್ತಿಸುವಂತೆ ಕಿವಿಮಾತು ಹೇಳಿದರು.

ಸಿಬ್ಬಂದಿ ಬಗ್ಗೆ ನಿರ್ದೇಶಕರು ಮತ್ತು ಕೆಲ ಅಧಿಕಾರಿಗಳೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಮನೋಭಾವ ಸರಿಪಡಿಸಿಕೊಳ್ಳದಿದ್ದರೆ ಕ್ರಮ ಅನಿವಾರ್ಯ ಎಂದು ಗೋವಿಂದಗೌಡ ಎಚ್ಚರಿಕೆ ನೀಡಿದರು.

ನಿರ್ದೇಶಕರು ಕಸ ಗುಡಿಸುವವರಲ್ಲ:

ಕೆಲ ಶಾಖಾ ವ್ಯವಸ್ಥಾಪಕರು ಕಚೇರಿಗೆ ಸಕಾಲಕ್ಕೆ ಬರುತ್ತಿಲ್ಲ, ನಿರ್ದೇಶಕರ ಕರೆ ಸ್ವೀಕರಿಸುವುದಿಲ್ಲವೆಂದು ಮೋಹನ್‌ರೆಡ್ಡಿ ಆರೋಪಿಸಿದಾಗ, ನಿರ್ದೇಶಕರಿಗೆ ಗೌರವ ನೀಡಬೇಕು, ಕರೆ ಸ್ವೀಕರಿಸಬೇಕು. ಸಲಹೆ ಸೂಚನೆ ನೀಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ, ಇಲ್ಲವೇ ನನ್ನ ಅಥವಾ ಎಂಡಿ ಗಮನಕ್ಕೆ ತರುವಂತೆ ಅಧ್ಯಕ್ಷರು ಸೂಚಿಸಿದರು. ಶ್ರೀನಿವಾಸಪುರ ಶಾಖೆ ವ್ಯವಸ್ಥಾಪಕ ಭಾನುಪ್ರಕಾಶ್ ವಿರುದ್ಧ ಹರಿಹಾಯ್ದ ನಿರ್ದೇಶಕ ಯಲವಾರ ಸೊಣ್ಣೇಗೌಡ, ನೀವು ನಿರ್ದೇಶಕರ ಕರೆ ಸ್ವೀಕರಿಸುವುದಿಲ್ಲ, ನಾವು ಕಸ ಗುಡಿಸುವವರು ಅಂದುಕೊಂಡಿದ್ದೀರಾ, ಸರಿಯಾಗಿ ಕೆಲಸ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆವಾಜ್ ಹಾಕಿದರು.

ಠೇವಣಿ ಸಂಗ್ರಹಿಸಿಲ್ಲ: ಬಂಗಾರಪೇಟೆ ಶಾಖೆಗೆ ಬೆಳೆ ಸಾಲಕ್ಕೆ ಹಣ ನೀಡಲಾಗಿದೆ. ಎರಡೂ ಜಿಲ್ಲೆಗೆ ಹೋಲಿಸಿದರೆ ಹೆಚ್ಚು ಸಾಲ ನೀಡಿದ್ದರೂ ಈವರೆಗೆ 5 ಲಕ್ಷ ರೂ. ಠೇವಣಿ ಸಂಗ್ರಹಿಸಲು ಆಗಿಲ್ಲವಾ ಎಂದು ವ್ಯವಸ್ಥಾಪಕ ಚಂದ್ರಶೇಖರ್ ಕಾರ್ಯವೈಖರಿ ಟೀಕಿಸಿದರು.

ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ವೇಳೆ ಮಾರ್ಗಸೂಚಿ ಪ್ರಕಾರ ಕಡತ ಹಾಜರುಪಡಿಸುವುದಿಲ್ಲ. ಹಣಕಾಸು ಬಾಬ್ತಿನ ರಸೀದಿ ನಿರ್ವಹಿಸುವಲ್ಲೂ ಉದಾಸೀನ. ನಾವೇ ಕಡತ ಹುಡುಕಿ ಪರಿಶೀಲಿಸಿ ತಪ್ಪು ಮುಂದುವರಿಯದಂತೆ ಎಚ್ಚರ ನೀಡಿದ್ದರೂ ಸುಧಾರಣೆ ಆಗಿಲ್ಲವೆಂದು ಪರಿಶೀಲನಾ ಅಧಿಕಾರಿ ಅರುಣ್ ದೂರಿದಾಗ ನಿರ್ದೇಶಕ ಸೊಣ್ಣೇಗೌಡ ಮಧ್ಯಪ್ರವೇಶಿಸಿ ತಪ್ಪು ಮಾಡುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ನಾರಾಯಣರೆಡ್ಡಿ, ಬ್ಯಾಂಕಿನ ಎಜಿಎಂ ಬೈರೇಗೌಡ, ಶಿವಕುಮಾರ್, ಖಲೀಮ್ ಉಲ್ಲಾ, ನಾಗೇಶ್, ಚೌಡಪ್ಪ ಇದ್ದರು.

62 ಕೋಟಿ ರೂ. ಸಾಲ ವಿತರಣೆ: ಕರೊನಾ ನಡುವೆಯೂ ರೈತರಿಗೆ 62 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ, ಸಾಲ ನೀಡಲು ಎರಡೂ ಜಿಲ್ಲೆಗಳ ತಾಲೂಕು ಶಾಖೆಗಳಿಗೆ ಹಣ ಒದಗಿಸಲಾಗಿದೆ. ಸಾಲ ನೀಡುವ ಜತೆಗೆ ಉಳಿತಾಯದ ಹಣವನ್ನು ಬ್ಯಾಂಕಿನಲ್ಲೇ ಠೇವಣಿ ಇಡಲು ಪ್ರೇರೇಪಿಸಿ ಬ್ಯಾಂಕಿನ ಅರ್ಥಿಕ ಶಕ್ತಿ ಹೆಚ್ಚಿಸುವಂತೆ ಗೋವಿಂದಗೌಡ ಸಭೆಯಲ್ಲಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net