

ಕೋಲಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಿಸಿಸಿ ಬ್ಯಾಂಕ್ ಹೊರತಂದಿರುವ ಕಿಸಾನ್ ಶ್ರೀಲಕ್ಷ್ಮೀ ಠೇವಣಿ ಬಾಂಡ್ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ನಗರದ ಒಕ್ಕಲಿಗರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕಿಸಾನ್ ಶ್ರೀಲಕ್ಷ್ಮೀ ಠೇವಣಿ ಬಾಂಡ್ ಲೋಕಾರ್ಪಣೆ ಮಾಡಿ ಮಾತನಾಡಿದರು.
ಅವಳಿ ಜಿಲ್ಲೆಗಳ ಮಹಿಳೆಯರು ಹಾಗೂ ನಾಗರಿಕರ ಆರ್ಥಿಕ ಭದ್ರತೆಗಾಗಿ ಆಕರ್ಷಕ ಬಡ್ಡಿದರದ ಠೇವಣಿ ಯೋಜನೆ ಸಹಕಾರಿ ಕ್ಷೇತ್ರದಲ್ಲಿ ನವ ಆಯಾಮ ಸೃಷ್ಟಿಸಲಿದೆ ಎಂದರು.
ಮಹಿಳಾ ಸಂಘಗಳಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ನೀಡುವ ಬ್ಯಾಂಕ್ ಯೋಜನೆ ಇಡೀ ದೇಶದಲ್ಲೇ ಮೊದಲು. ಹೀಗಾಗಿ ತಾಯಂದಿರು ಸಾಲದ ಹಣ ಸದುಪಯೋಗ ಮಾಡಿಕೊಂಡು ಆರ್ಥಿಕ ಭದ್ರತೆ ಸಾಧಿಸಬೇಕು ಎಂದು ಸೂಚಿಸಿದರು.
ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಅವಿಭಜಿತ ಜಿಲ್ಲೆಯ ಮಹಿಳಾ ಸಂಘದ 4 ಲಕ್ಷ ಸದಸ್ಯರನ್ನು ಒಗ್ಗೂಡಿಸಿ ಕೋಲಾರದಲ್ಲಿ ಸಮಾವೇಶ ನಡೆಸಲಾಗುವುದು. ಮುಂದಿನ ವರ್ಷದ ಮಹಿಳಾ ದಿನಾಚರಣೆಗೆ ಮಹಿಳಾ ಸಮ್ಮೇಳನ ನಡೆಸಿ ಸಾಧಕರನ್ನು ಪುರಸ್ಕರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 3.72 ಲಕ್ಷ ಮಹಿಳೆಯರಿಗೆ ಸಾಲ ನೀಡಲಾಗಿದೆ. ಸಾಲವನ್ನು 10 ಲಕ್ಷ ರೂ.ಗೆ ಏರಿಸಲು ಚಿಂತನೆ ನಡೆಸಲಾಗಿದೆ. ಮಹಿಳಾ ಸಂಘಗಳ ಠೇವಣಿ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಿಂತಲೂ ಹೆಚ್ಚಿನ ಬಡ್ಡಿ ನೀಡಲಾಗುವುದು ಎಂದು ಪ್ರಕಟಿಸಿದರು.
ನಿವೇಶನಕ್ಕೆ ಮನವಿ: ನಗರದಲ್ಲಿ ಮಹಿಳಾ ಭವನ ನಿರ್ಮಿಸಲು ನಿವೇಶನ ಒದಗಿಸುವ ಮೂಲಕ ಖಾಸಗಿ ಕಂಪನಿಗಳ ನೆರವಿನಿಂದ ಕಟ್ಟಡ ನಿರ್ಮಾಣ ಮಾಡಿಸಿಕೊಡಬೇಕು. ಇದರಿಂದ ಸಾವಿರಾರು ಮಹಿಳೆಯರು ಒಂದೆಡೆ ಸೇರಿ ಸಭೆ, ಸಮಾರಂಭ ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಶ್ರೀನಿವಾಸಗೌಡರಲ್ಲಿ ಮನವಿ ಮಾಡಿದರು.
ಬ್ಯಾಂಕ್ ನಿರ್ದೇಶಕರಾದ ಎಂ.ಎಲ್. ಅನಿಲ್ ಕುಮಾರ್, ದಯಾನಂದ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ಎಂಡಿ ರವಿ, ಮ್ಯಾನೇಜರ್ ಅಂಬರೀಷ್, ಮೇಲ್ವಿಚಾರಕ ಅಮೀನಾ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಅರುಣಮ್ಮ ಇತರರಿದ್ದರು.
ಏನಿದು ಬಾಂಡ್?: ರೈತ ಮಹಿಳೆಯರು ಆದಾಯದಲ್ಲಿ ಉಳಿತಾಯ ಮಾಡಿದ ಹಣವನ್ನು ಬ್ಯಾಂಕ್‌ನಲ್ಲಿ 6 ತಿಂಗಳು ಮೇಲ್ಪಟ್ಟು ಠೇವಣಿ ಇಡಬಹುದು. ಠೇವಣಿಗೆ ಶೇ.8 ವಾರ್ಷಿಕ ಬಡ್ಡಿಯನ್ನು ಬ್ಯಾಂಕ್ ನೀಡುತ್ತದೆ. ಠೇವಣಿದಾರರಿಗೆ ಬ್ಯಾಂಕ್ ಮೇಲೆ ನಂಬಿಕೆ ಮೂಡಿಸುವ ಸಲುವಾಗಿ ಹಾಗೂ ಭದ್ರತೆಗಾಗಿ ನೀಡುವ ಬಾಂಡ್ ಇದಾಗಿದೆ.
ಸಾಧಕಿಯರಿಗೆ ಸನ್ಮಾನ: ಮಹಿಳಾ ದಿನಾಚರಣೆ ಅಂಗವಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರದ ಅಂಬೇಡ್ಕರ್ ನಗರದ ಅನುಗ್ರಹ ಮಹಿಳಾ ಸಂಘ, ಚಿಕ್ಕನಹಳ್ಳಿ ಮಹಾಲಕ್ಷ್ಮೀ, ಅಮ್ಮನಲ್ಲೂರಿನ ನಂದಿನಿ, ಜಡೇರಿಯ ಚೌಡೇಶ್ವರಿ, ಮದ್ದೇರಿ ಲಕ್ಷ್ಮಿ, ಕಾಕಿನತ್ತದ ವಿದ್ಯಾ, ಅಣ್ಣಿಹಳ್ಳಿ ಕಾವೇರಿ, ಗದ್ದೆಕಣ್ಣೂರಿನ ವೇಣುಗೋಪಾಲಸ್ವಾಮಿ, ಶೆಟ್ಟಿಹಳ್ಳಿಯ ಮದಗದಮ್ಮ, ಉದ್ದಪ್ಪನಹಳ್ಳಿಯ ಓಂಶಕ್ತಿ, ಕಾಮಂಡಹಳ್ಳಿಯ ಯೋಗಿ ನಾರಾಯಣ, ಕೋಲಾರದ ಇದ್ರಿಸಾಬ್ ಮೊಹಲ್ಲಾದ ಕುತುಬ್ ಮಹಿಳಾ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.