ಡಿಸಿಸಿ ಬ್ಯಾಂಕ್ ನೀಡುವ ಸಾಲಕ್ಕೆ ಯಾವುದೇ ಶ್ಯೂರಿಟಿ ಬೇಡ

4 KSM- 1
Published on

ಕಾಮಸಮುದ್ರ: ಡಿಸಿಸಿ ಬ್ಯಾಂಕ್ ಹೆಣ್ಣು ಮಕ್ಕಳ ಸ್ವ-ಸಹಾಯ ಸಂಘಗಳನ್ನು ನಂಬಿ ಸಾಲ ನೀಡುತ್ತಿದ್ದು, ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಆರ್ಥಿಕವಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ಕಾಳಮ್ಮಗುಡಿ ವೃತ್ತದಲ್ಲಿ ತೊಪ್ಪನಹಳ್ಳಿ-ದೋಣಿಮಡಗು ಗ್ರಾಪಂ ವ್ಯಾಪ್ತಿಯ 75 ಸ್ವ-ಸಹಾಯ ಸಂಘಗಳಿಗೆ ಕಾಮಸಮುದ್ರ ವಿಎಸ್‌ಎಸ್‌ಎನ್‌ನಿಂದ 2.25 ಕೋಟಿ ರೂ.ಸಾಲ ವಿತರಿಸಿ ಮಾತನಾಡಿ, ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆಯಲು ಯಾವುದೇ ಶ್ಯೂರಿಟಿ ಕೊಡುವ ಅಗತ್ಯವಿಲ್ಲ ಹಾಗೂ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸುವುದಾಗಲಿ, ಅವರಿಗೆ ಹಣ ನೀಡುವುದಾಗಲಿ ಮಾಡಬೇಕಿಲ್ಲ ಎಂದರು.

ಪಡೆದ ಸಾಲಕ್ಕೆ ಬಡ್ಡಿ ಕಟ್ಟುವ ಅಗತ್ಯವಿಲ್ಲ. ಪ್ರತಿ ಸಂಘಕ್ಕೆ 3 ಲಕ್ಷ ರೂ. ಸಾಲ ನೀಡುತ್ತಿದ್ದು, ಪ್ರತಿ ತಿಂಗಳು ಸಾಲದ ಅಸಲನ್ನು ಕಟ್ಟಿ ಮರುಪಾತಿಸಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕ್‌ನಿಂದ ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಸಾಲ ಪಡೆದ ಮಹಿಳೆಯರು ಉಳಿತಾಯದ ಹಣವನ್ನು ಇತರ ಬ್ಯಾಂಕ್‌ನಲ್ಲಿ ಇಡುವ ಬದಲು ಡಿಸಿಸಿ ಬ್ಯಾಂಕಿ ಖಾತೆಯಲ್ಲಿ ಇಡಬೇಕು ಎಂದರು.

ನಮ್ಮಲ್ಲಿ ಇಡುವ ಉಳಿತಾಯದ ಹಣಕ್ಕೆ ಬ್ಯಾಂಕ್‌ನಿಂದ ನಿಮಗೆ ಬಡ್ಡಿ ನೀಡುತ್ತೇವೆ. ಆದರೆ ನೀವು ಬ್ಯಾಂಕ್‌ನಿಂದ ತೆಗೆದುಕೊಳ್ಳುವ ಹಣಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ. ಇದು ನಿಮ್ಮದೇ ಬ್ಯಾಂಕ್ ಆಗಿರುವುದರಿಂದ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಪ್ರಸ್ತುತ ಮಹಿಳಾ ಸಂಘಗಳಲ್ಲಿನ ಪ್ರತಿ ಸದಸ್ಯರಿಗೆ 30 ಸಾವಿರ ರೂ. ಸಾಲವನ್ನಾಗಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 50 ಸಾವಿರದಿಂದ 1 ಲಕ್ಷ ರೂ.ಗೆ ಏರಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿಚ್ಚಹಳ್ಳಿ ಗೋವಿಂದರಾಜು, ನಾಗಿರೆಡ್ಡಿ, ದೋಣಿಮಡಗು ಗ್ರಾಪಂ ಅಧ್ಯಕ್ಷ ಲಕ್ಷಣ್ ಭೋವಿ, ಕಾಮಸಮುದ್ರ ಗ್ರಾಪಂ ಅಧ್ಯಕ್ಷ ಆದಿನಾರಾಯಣ, ಬಲಮಂದೆ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ವೆಂಕಟೇಶ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಶಿಧರ್, ಮುಖಂಡರಾದ ಚಾಮುಂಡಿಗೌಡ, ರಂಗಾಚಾರಿ, ಶ್ರೀರಾಮ್, ಕೋದಂಡಪ್ಪ ಇದ್ದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದ್ದು, ಹೈನೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್‌ನಿಂದ ಅರ್ಧ ಎಕರೆ ಜಮೀನು ಹೊಂದಿರುವ ರೈತ ಮಹಿಳೆಯರಿಗೆ 80 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡುವ ನೂತನ ಯೋಜನೆ ಜಾರಿಗೊಳಿಸಿಲಾಗಿದೆ. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು.

ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net