ಮಾ.15ರೊಳಗೆ ಡಿಸಿಸಿ ಬ್ಯಾಂಕ್‌ನಿಂದ 400 ಕೋಟಿ ರೂಪಾಯಿ ಠೇವಣಿ ಸಂಗ್ರಹಣೆಗೆ ಗುರಿ

8-klr-6
Published on

ಕೋಲಾರ: ಶ್ರೀಮಂತರು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುತ್ತಿಲ್ಲ, ಬಡ ಮಹಿಳೆಯರಿಂದಾಗಿ ಬ್ಯಾಂಕ್ ಉಳಿದಿದ್ದು, ಪ್ರಗತಿಯತ್ತ ಸಾಗಬೇಕಾದರೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕಿವಿಮಾತು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡದಿದ್ದರೆ ಬ್ಯಾಂಕಿಗೆ ದ್ರೋಹ ಬಗೆದಂತಾಗುತ್ತದೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಕೆಲವರು ಕಾರ್ಯವೈಖರಿ ಬದಲಿಸಿಕೊಂಡಿಲ್ಲ. ಇನ್ನು ಮುಂದೆ ಪೆನ್ನು-ಪೇಪರ್ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾರ್ಚ್ 15 ರೊಳಗೆ ಎಲ್ಲ ಶಾಖೆಗಳಲ್ಲಿ ನಾವು ನೀಡಿರುವ ಗುರಿ ಸಾಧಿಸಿ ವರದಿ ನೀಡಬೇಕು. ಉದಾಸೀನ ತೋರಿದರೆ ನಿಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ಎಂದು ಗಡುವು ನೀಡಿದರು.

ಸಾಲ ವಿತರಣೆಯಲ್ಲಿ ಮುಂದಿದ್ದರೂ ಠೇವಣಿ ಸಂಗ್ರಹಣೆ ತೃಪ್ತಿದಾಯವಾಗಿಲ್ಲ, ಆಡಳಿತ ಮಂಡಳಿ, ಬ್ಯಾಂಕಿನ ಸಿಬ್ಬಂದಿ ಪ್ರಯತ್ನಿಸಿದರೆ ಪ್ರಗತಿ ಸಾಧಿಸಬಹುದು. ಮಾ.15ರೊಳಗೆ 400 ಕೋಟಿ ರೂ.ಠೇವಣಿ ಸಂಗ್ರಹಣೆ ಮಾಡುವಂತೆ ಟಾಸ್ಕ್ ನೀಡಿದರು.

ಬ್ಯಾಂಕಿನಿಂದ ಈವರೆಗೆ 870 ಕೋಟಿ ರೂ. ಸಾಲವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ, ಠೇವಣಿ ಸಂಗ್ರಹ ಪ್ರಮಾಣ ಹೆಚ್ಚಾದಲ್ಲಿ 1000 ಕೋಟಿ ರೂ. ಸಾಲ ನೀಡಬಹುದು ಎಂದರು.

ಬ್ಯಾಂಕಿನ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಕಾನೂನು ವ್ಯಾಪ್ತಿಯಲ್ಲಿ ಮಾಹಿತಿ ಕೇಳಿದರೆ ಅಂಜಬೇಕಿಲ್ಲ. ಅರ್ಜಿದಾರರು ಕೇಳುವ ಮಾಹಿತಿ ನೀಡಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಚಿಕ್ಕಬಳ್ಳಾಪುರಕ್ಕೆ ಸಾಲ ನೀಡಬೇಕು:ಮಾಲೂರು ಮತ್ತು ಮುಳಬಾಗಿಲಿನಲ್ಲಿ ಬಾಕಿ ಇರುವ ಸಾಲ ವಸೂಲಾತಿ ಮಾಡಬೇಕು. ಕೆಜಿಎಫ್, ಬಂಗಾರಪೇಟೆ ವ್ಯಾಪ್ತಿಯ ಸ್ವಸಹಾಯ ಸಂಘಗಳಿಗೆ ಹೆಚ್ಚು ಸಾಲ ವಿತರಿಸಿದೆ. ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಮಹಿಳಾ ಸಂಘಗಳಿಗೆ ಸಾಲ ವಿತರಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಅಧಿಕಾರಿಗಳು ಈ ಎರಡೂ ತಾಲೂಕಿನ ಸಾಲ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ದಯಾನಂದ್, ಹನುಮಂತರೆಡ್ಡಿ, ಮೋಹನ್‌ರೆಡ್ಡಿ, ಯಲವಾರ ಸೊಣ್ಣೇಗೌಡ, ನಾಗೀರೆಡ್ಡಿ, ವೆಂಕಟರೆಡ್ಡಿ, ಬ್ಯಾಂಕಿನ ಎಂಡಿ ರವಿಕುಮಾರ್, ಎಜಿಎಂಗಳಾದ ಶಿವಕುಮಾರ್, ಬೈರೇಗೌಡ, ಕಲಿಂಮುಲ್ಲಾ, ನಾಗೇಶ್, ಚೌಡಪ್ಪ ಮತ್ತಿತರರಿದ್ದರು.

ಅಪೆಕ್ಸ್‌ನಲ್ಲಿ ಅರ್ಹತೆ ಪಡೆಯಿರಿ: ಕಾಟಾಚಾರಕ್ಕೆ ಠೇವಣಿ ಸಂಗ್ರಹಿಸುತ್ತಿಲ್ಲ. ಠೇವಣಿ ಸಂಗ್ರಹಿಸಿದರೆ ಮಾತ್ರ ಅಪೆಕ್ಸ್ ಬ್ಯಾಂಕಿನ ಮುಂದಿನ ಚುನಾವಣೆಗೆ ನಮ್ಮ ಪ್ರತಿನಿಧಿ ಕಳುಹಿಸಲು ಆರ್ಹತೆ ಪಡೆಯುತ್ತೇವೆ. ಇಲ್ಲದೆ ಹೋದರೆ ನಮಗೆ ಮಾನ ಮಾರ್ಯದೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಸವಾಲಾಗಿ ಸ್ವೀಕರಿಸಿ: ನಬಾರ್ಡ್ ಅಧಿಕಾರಿಗಳು ಇತ್ತೀಚೆಗೆ ಬ್ಯಾಂಕಿಗೆ ಭೇಟಿ ನೀಡಿದ್ದಾಗ ಶೇ.8 ಇದ್ದ ಕ್ರೋಡೀಕೃತ ನಷ್ಟ ಶೇ.3ಕ್ಕೆ ಇಳಿದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾ.15ರೊಳಗೆ ಶೇ.2ಕ್ಕೆ ತಲುಪಿದಲ್ಲಿ ಬ್ಯಾಂಕ್ ದೇಶದಲ್ಲಿ ನಂಬರ್ 1 ಆಗುತ್ತದೆ. ಅಧಿಕಾರಿಗಳು ಇದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಗೋವಿಂದಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net