

ಶ್ರೀನಿವಾಸಪುರ: ಉಳುವವನಿಗೆ ನರಿ ತೋರಿಸುವ ಮಾದರಿಯಲ್ಲಿ ಚೇತರಿಸಿಕೊಂಡಿರುವ ಡಿಸಿಸಿ ಬ್ಯಾಂಕನ್ನು ಮತ್ತೆ ಅವನತಿಗೆ ತಲುಪಿಸಲು ಕೆಲವರು ಮುಂದಾಗಿದ್ದಾರೆ, ಅಂತಹವರ ಬಗ್ಗೆ ಎಚ್ಚರವಿರಲಿ. ಡಿಸಿಸಿ ಬ್ಯಾಂಕ್ ವೆಂಕಟರಮಣಸ್ವಾಮಿ ಹುಂಡಿ ಇದ್ದಂತೆ. ಅಲ್ಲಿಂದ ಪಡೆದ ಸಾಲ ಹಿಂದಿರುಗಿಸಲೇಬೇಕು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ಬ್ಯಾಂಕ್ ನೇತೃತ್ವದಲ್ಲಿ ಮಣಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಸ್ತ್ರೀಶಕ್ತಿ ಸಂಘಗಳಿಗೆ 2 ಕೋಟಿ ರೂ. ಹಾಗೂ ಕೃಷಿ ಬೆಳೆ ಸಾಲವಾಗಿ 1.27 ಲಕ್ಷ ರೂಗಳನ್ನು ಶೂನ್ಯಬಡ್ಡಿ ದರದಲ್ಲಿ ವಿತರಣೆ ಮಾಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ತಾಯಿಯಂತೆ ಬಡ ಕುಟುಂಬಗಳನ್ನು ಕಾಪಾಡುತ್ತಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರೂ ಬ್ಯಾಂಕಿನಲ್ಲಿ ಖಾತೆ ತೆರೆದು ಠೇವಣಿ ಇಡಿ. ಇಲ್ಲವಾದರೆ ನಿಮ್ಮಂತಹ ಹಲವಾರು ಬಡ ಕುಟುಂಬಗಳಿಗೆ ಸಾಲ ನೀಡಲು ಕಷ್ಟವಾಗುತ್ತದೆ. ಇಲ್ಲಿ ನೋಟುಗಳು ಬಿಡುವ ಗಿಡಗಳಿಲ್ಲ, ಆ ಗಿಡಗಳು ನೀವೇ ಆಗಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ನನಗೆ ನನ್ನ ಕ್ಷೇತ್ರದ ಜನಕ್ಕೆ ನೀಡಿರುವ ಮಾತು ಉಳಿಸಿಕೊಂಡು ಎಲ್ಲ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಮತ್ತು ಯಾವುದೇ ಬಡ್ಡಿಕೋರನಿಗೆ ತಲೆ ತಗ್ಗಿಸದೆ ಗೌರವಯುತವಾಗಿ ಜೀವನ ನಿರ್ವಹಣೆಗೆ ಸಹಕರಿಸುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕ್ ಉಳಿಯಲು ಪೂರಕವಾಗಿ ಪ್ರತಿಯೊಬ್ಬರೂ ಠೇವಣಿ ಇಡುವ ಕೆಲಸ ಮಾಡಬೇಕು. 6-7 ವರ್ಷಗಳಿಂದ ಪ್ರತಿ ಮಹಿಳೆಯರಿಗೆ ಸಾಲ ನೀಡುತ್ತಿದ್ದೇವೆ. ಇಲ್ಲಿ ಪಡೆದ ಸಾಲವನ್ನು ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಮಾಡದೆ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು. ಈ ಸಹಕಾರಿ ಬ್ಯಾಂಕಿಗೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಬಡವರ ಆಶೀರ್ವಾದದಿಂದಲೇ ಡಿಸಿಸಿ ಬ್ಯಾಂಕ್ ಉಳಿಯಬೇಕಾಗಿದೆ ಎಂದರು.
ಮಣಿಗಾನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಂ.ವೆಂಕಟರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವೆಂಕಟರೆಡ್ಡಿ, ಜಿಪಂ ಸದಸ್ಯ ಗೋವಿಂದಸ್ವಾಮಿ, ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ನಿರ್ದೇಶಕ ತೂಪಲ್ಲಿ ಕೃಷ್ಣಾರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಗುತ್ತಿಗೆದಾರ ಆಲವಾಟ ಮಂಜುನಾಥರೆಡ್ಡಿ, ತಾಪಂ ಮಾಜಿ ಸದಸ್ಯ ಕೆ.ಕೆ. ಮಂಜು, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯರೆಡ್ಡಿ ಇತರರು ಇದ್ದರು.
ನನಗೆ ಯಾರ ಮೇಲೂ ದ್ವೇಷವಿಲ್ಲ: ಹೆಣ್ಣುಮಕ್ಕಳ ಅಪೇಕ್ಷೆಯಂತೆ 50 ಸಾವಿರ ರೂ. ಸಾಲ ನೀಡಿದ್ದೇವೆ. ನಂತರ ಬಂದ ಬೇಡಿಕೆಯಂತೆ 1 ಲಕ್ಷ ರೂ. ಬಡ್ಡಿ ರಹಿತವಾಗಿ ನೀಡುವ ಚಿಂತನೆ ಮಾಡಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅದು ವಿಳಂಬವಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ನನಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಸಾಂದರ್ಭಿಕವಾಗಿ ಇದ್ದ ಹಾಗೆ ಮಾತನಾಡಿರುತ್ತೇನೆ, ಇದರಲ್ಲಿ ಯಾವುದೇ ತಪ್ಪು ಭಾವನೆ ಬೇಡ ಎಂದು ರಮೇಶ್‌ಕುಮಾರ್ ಹೇಳಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಹಾಲಿನ ಉತ್ಪಾದನೆ ಕುಸಿದಿರುವುದು ಆತಂಕದ ವಿಚಾರ. ಹಾಲು ಇಲ್ಲವಾದರೆ ಇಲ್ಲಿನ ಜನರ ಬದುಕು ಬರಡಾಗುತ್ತದೆ. ಆದ್ದರಿಂದ ಪಡೆದ ಸಾಲದಲ್ಲಿ ರಾಸುಗಳನ್ನು ಖರೀದಿಸುವ ಮೂಲಕ ಹೈನೋದ್ಯಮ ಬಲಪಡಿಸಿದರೆ ಸಹಕಾರಿ ವ್ಯವಸ್ಥೆ ಬಲಪಡಿಸಿದಂತೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ