ಜಿಲ್ಲಾದ್ಯಂತ 40 ಕಂಟೇನ್ಮೆಂಟ್ ವಲಯ ಚಾಲ್ತಿ

DC Patil
Published on

ವಿಜಯಪುರ: ಜಿಲ್ಲೆಯಲ್ಲಿ ಪ್ರಸ್ತುತ 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿದ್ದು, ಮಹಾಮಾರಿ ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೊನಾ ಮುನ್ನೆಚ್ಚರಿಕೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಹೀಗಾಗಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸುವುದರ ಜತೆಗೆ 60ಕ್ಕಿಂತ ಮೇಲ್ಪಟ್ಟ ವಯೋಮಾನದವರು ಹಾಗೂ 10 ವರ್ಷದೊಳಗಿನ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಜಾಗೃತಿ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಥಮಿಕ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಲಕ್ಷಣ ಕಂಡುಬಂದಲ್ಲಿ ಯಾವುದೇ ರೀತಿಯ ಸ್ವಯಂ ಧ್ಯಾನಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಗೆ ಒಳಪಡಬೇಕು. ಮಳೆಗಾಲ ಇರುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ತೀವ್ರ ಉಸಿರಾಟ ತೊಂದರೆ ಆಗುವವರೆಗೆ ವಿಳಂಬ ಮಾಡದೇ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ತಿಳಿಸಿದರು.

ವಲಸಿಗರ ಮೇಲೆ ನಿಗಾ

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದವರು ತಕ್ಷಣ ಆಯಾ ಪಟ್ಟಣಗಳ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಆಡಳಿತ ವರ್ಗಕ್ಕೆ ಹಾಗೂ ಆಯಾ ಗ್ರಾಮ ಪಂಚಾಯಿತಿಗೆ ಮಾಹಿತಿ ಒದಗಿಸಬೇಕು. ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಬಂಧನಕ್ಕೆ ಒಳಪಡುವಂತೆಯೂ ಅವರು ತಿಳಿಸಿದ್ದು, ಇಂತಹ ವ್ಯಕ್ತಿಗಳು ಬಂದ ತಕ್ಷಣ ಸಹಾಯವಾಣಿ 1077 ಗೂ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

ಕಂಟೇನ್ಮೆಂಟ್ ವಲಯ

ಜಿಲ್ಲಾದ್ಯಂತ ಈವರೆಗೆ ಒಟ್ಟು 85 ಕಂಟೇನ್ಮೆಂಟ್ ವಲಯಗಳನ್ನು ಗೊತ್ತುಪಡಿಸಿದ್ದು, ಇದರಲ್ಲಿ 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ. ಈವರೆಗೆ ಒಟ್ಟು 45 ಕಂಟೇನ್ಮೆಂಟ್ ವಲಯಗಳನ್ನು ಡಿ ನೋಟಿಫಿಕೇಷನ್ ಮಾಡಲಾಗಿದೆ. ನಗರದಲ್ಲಿ 20, ವಿಜಯಪುರ ಗ್ರಾಮಾಂತರದಲ್ಲಿ 2, ಬಬಲೇಶ್ವರದಲ್ಲಿ 1, ತಿಕೋಟಾದಲ್ಲಿ 1, ಬ.ಬಾಗೇವಾಡಿಯಲ್ಲಿ ಯಾವುದೇ ಕಂಟೇನ್ಮೆಂಟ್ ವಲಯಗಳಿಲ್ಲ, ನಿಡಗುಂದಿಯಲ್ಲಿ 2, ಇಂಡಿ-7, ಚಡಚಣ-1, ಮುದ್ದೇಬಿಹಾಳ-4, ಸಿಂದಗಿ-2 ಹೀಗೆ ಒಟ್ಟು 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ ಎಂದು ಅವರು ತಿಳಿಸಿದರು.

ವಲಯಗಳ ವಿವರ

ವಿಜಯಪುರ ನಗರದ ಅಲ್ಲಾಪುರ ಬೇಸ್, ಗ್ಯಾಂಗ್ ಬಾವಡಿ, ತಾಜ್ ಬಾವಡಿ, ರಾಜಾಜಿನಗರ, ಮೆಹಬೂಬ್‌ನಗರ(ಕೆ.ಎಚ್.ಬಿ), ಹರಣಶಿಕಾರ ಗಲ್ಲಿ, ಗೋಳಗುಮ್ಮಟ ಎದುರು, ಆದರ್ಶನಗರ, ಗಿಸಾಡಿ ಓಣಿ(ಇಂಡಿ ರಸ್ತೆ), ಮಿಷನ್ ಕಂಪೌಂಡ್, ರೈಲ್ವೆ ನಿಲ್ದಾಣ, ಅಪ್ಸರಾ ಥೇಟರ್, ಸಕ್ಾ ರೋಜಾ, ಹಬೀಬನಗರ(ಅಥಣಿ ರಸ್ತೆ), ನವಬಾಗ, ನಾಗರಬಾವಡಿ, ಜಾಮಿಯಾ ಮಸೀದಿ ಹಿಂಭಾಗ, ಎಸ್‌ಪಿ ಕಾಲನಿ, ಶಿಕಾರಖಾನೆ, ಅಕ್ಕಿ ಕಾಲನಿ, ವಿಜಯಪುರ ಗ್ರಾಮಾಂತರದಲ್ಲಿ ಹೆಗಡಿಹಾಳ ತಾಂಡಾ, ಅದರಂತೆ ಬಬಲೇಶ್ವರ ತಾಲೂಕಿನ ತೋನಶಾಳ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ, ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ತಾಂಡಾ, ಇಂಡಿ ತಾಲೂಕಿನ ಅಥರ್ಗಾ, ಮಿರಗಿ, ಸಾಲೋಟಗಿ ರಸ್ತೆ ಇಂಡಿ, ಹಿರೇಬೇವನೂರ, ಕೋರ್ಟ್ ಹತ್ತಿರ ಇಂಡಿ, ಹಿಂಗಣಿ, ಹಿಂಗಣಿ(ತೋಟ), ಚಡಚಣ ತಾಲೂಕಿನ ಹಲಸಂಗಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರ, ಗಣೇಶ ನಗರ, ಮುದ್ದೇಬಿಹಾಳ, ದೋಟೆಗಲ್ಲಿ, ಮುದ್ದೇಬಿಹಾಳ, ಯರಗಲ್, ಸಿಂದಗಿ ತಾಲೂಕಿನ ಆಲಮೇಲ ಮತ್ತು ವಾರ್ಡ್ ನಂಬರ 7 ಹಾಗೂ ಸಿಂದಗಿಯಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು.
ಅದರಂತೆ ವಿಜಯಪುರ ನಗರದ 5, ಬಬಲೇಶ್ವರದ 2, ತಿಕೋಟಾದ 3, ಬ.ಬಾಗೇವಾಡಿಯ 6, ನಿಡಗುಂದಿಯ 1, ಇಂಡಿಯ 3, ಚಡಚಣದ 3, ಮುದ್ದೇಬಿಹಾಳದ 3, ತಾಳಿಕೊಟೆಯ 7, ಸಿಂದಗಿಯ 6, ದೇವರ ಹಿಪ್ಪರಗಿಯ 6 ಕಂಟೇನ್ಮೆಂಟ್ ವಲಯಗಳು ಸೇರಿದಂತೆ ಒಟ್ಟು 45 ವಲಯಗಳನ್ನು ಡಿ ನೋಟಿಫಿಕೇಷನ್ ಮಾಡಲಾಗಿದೆ ಎಂದು ಅವರು ತಿಳಿಸಿದರು. ತಾಲೂಕು ದಂಡಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net