ಹೆಚ್ಚುವರಿ ಶುಲ್ಕ ಪಡೆದರೆ ಕಠಿಣ ಕ್ರಮ, ಖಾಸಗಿ ಶಾಲೆಗಳಿಗೆ ಡಿಸಿ ಎಚ್ಚರಿಕೆ

73A2647.JPG
Published on

ಬೆಳಗಾವಿ: ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಬಿಲ್ಡಿಂಗ್ ಶುಲ್ಕ ಹಾಗೂ ಡೊನೆಷನ್ ನೆಪದಲ್ಲಿ ಪಾಲಕರಿಂದ ಹೆಚ್ಚುವರಿಯಾಗಿ ಹಣ ಪಡೆದರೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು.
ಎಸ್ಪಿ ಕಚೇರಿಯಲ್ಲಿ ಪೋನ್‌ಇನ್ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಹೆಚ್ಚು ಡೊನೆಷನ್ ಪಡೆಯುತ್ತಿದ್ದಾರೆಂಬ ದೂರುಗಳು ಕೇಳಿಬರುತ್ತಿವೆ. ಪಾಲಕರು ಹೆಚ್ಚುವರಿ ಡೊನೆಷನ್ ಕಟ್ಟಿರುವ ಬಗ್ಗೆ ರಸೀದಿ ತೋರಿಸಿದರೆ ಕ್ರಮ ಕೈಗೊಳ್ಳುವುದಕ್ಕೆ ಅನುಕೂಲವಾಗುತ್ತದೆ ಅಥವಾ ಪಾಲಕರು ಒಟ್ಟಾಗಿ ಬಂದು ದೂರು ನೀಡಿದರೆ ಅಂಥಹ ಶಾಲೆಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನಡೆಸುತ್ತಿರುವ ಪೋನ್ ಇನ್ ಕಾರ್ಯಕ್ರಮ ರಾಜ್ಯದಲ್ಲೇ ವಿನೂತನ ಉಪಕ್ರಮವಾಗಿದೆ. ಪೋನ್‌ಇನ್ ಮೂಲಕ ಹಲವಾರು ಸಾರ್ವಜನಿಕ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಈವರೆಗೆ 13 ಪೋನ್ ಇನ್‌ಗಳು ಜರುಗಿದ್ದು, ಒಟ್ಟು 790 ಕರೆಗಳು ಬಂದಿವೆ. ಶನಿವಾರ ನಡೆದ 13ನೇ ಪೋನ್ ಇನ್‌ನಲ್ಲೂ 63 ಕರೆಗಳು ಬಂದಿದ್ದು, ಅವುಗಳನ್ನು ದಾಖಲಿಸಿಕೊಳ್ಳಲಾಗಿದೆ. ರಸ್ತೆ, ಸ್ಮಶಾನ, ಕೌಟುಂಬಿಕ ಕಲಹ, ಕಳ್ಳಭಟ್ಟಿ, ಸರಾಯಿ, ರಸ್ತೆ ಇಲ್ಲದಿರುವ ಸಮಸ್ಯೆ, ಪೊಲೀಸ್ ದೂರು ಪ್ರಕರಣಗಳು ಸೇರಿ ಹಲವಾರು ಕರೆಗಳು ಬಂದಿವೆ. ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಇನ್‌ನಲ್ಲಿ ಬಂದ ದೂರುಗಳನ್ನು ನಿವಾರಿಸುವುದಕ್ಕೆ ತಿಳಿಸಿದ್ದೇವೆ. ಶೀಘ್ರದಲ್ಲೇ ಈ ಸಮಸ್ಯೆಗಳು ನಿವಾರಣೆಯಾಗಲಿವೆ. ಬಹಳಷ್ಟು ಜನರು ಜಮೀನು ವಾಜ್ಯ, ಕೌಟುಂಬಿಕ ಸಮಸ್ಯೆಗಳನ್ನು ಹೇಳಿಕೊಂಡರು. ಅಗತ್ಯವಿರುವರಿಗೆ ಉಚಿತ ಕಾನೂನು ಸೇವೆ ಕಲ್ಪಿಸುತ್ತೇವೆ ಎಂದರು.
ಜಿಲ್ಲೆಯ 1,227 ಗ್ರಾಮಗಳಿಗೆ ಸ್ಮಶಾನ ಜಾಗ ಕೊಟ್ಟಿದ್ದೇವೆ. ನಾನು ಅಧಿಕಾರಿ ಸ್ವೀಕರಿಸಿದ ಸಂದರ್ಭದಲ್ಲಿ 400 ಗ್ರಾಮಗಳಿಗೆ ಸ್ಮಶಾನ ಭೂಮಿ ಇರಲಿಲ್ಲ. 114 ಅರಣ್ಯ ಜಮೀನಿನಲ್ಲಿ ಅಭಿಯಾನದ ರೂಪದಲ್ಲಿ ಸ್ಮಶಾನ ಭೂಮಿ ಕೊಡಿಸಿದ್ದೇವೆ. 27 ಕಡೆಗಳಲ್ಲಿ ಖಾಸಗಿ ಜಾಗ ಖರೀದಿಸಿ ಸ್ಮಶಾನ ಭೂಮಿ ಕೊಟ್ಟಿದ್ದೇವೆ. ಹೀಗೆ ಪ್ರತಿ ಹಳ್ಳಿಗೂ ಸ್ಮಶಾನ ಭೂಮಿ ಕೊಡಲಾಗಿದೆ. ಈಗ ಗ್ರಾಮಗಳ ಹತ್ತಿರ ಸ್ಮಶಾನ ಭೂಮಿ ಬೇಕು ಹಾಗೂ ಸಮುದಾಯಕ್ಕೆ ಸ್ಮಶಾನ ಭೂಮಿ ಬೇಕು ಎಂದು ಹೆಚ್ಚುವರಿ ಬೇಡಿಕೆ ಇಟ್ಟಿದ್ದಾರೆ. ಸ್ಮಶಾನ ಭೂಮಿ ಖರೀದಿಗೆ ಇನ್ನೂ 1.63 ಕೋಟಿ ರೂ. ಅಗತ್ಯವಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net