ಸಾರ್ವಜನಿಕರ ಕೆಲಸ ವಿಳಂಬವಾದರೆ ಜೋಕೆ

DC Meeting
Published on

ದಾಂಡೇಲಿ: ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಈ ಕುರಿತು ನಿಷ್ಕಾಳಜಿ ತೋರಿದರೆ ಅಂತಹ ನಗರಸಭೆ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಆರ್. ಮಾನಕರ್ ಖಡಕ್ ಎಚ್ಚರಿಕೆ ನೀಡಿದರು.

ಸ್ಥಳೀಯ ನಗರಸಭೆಯಲ್ಲಿ ಸೋಮವಾರ ಆಡಳಿತ ಸುಧಾರಣೆ ಹಾಗು ಸ್ಥಳೀಯ ಸಮಸ್ಯೆ ಕುರಿತು ಸಭೆ ನಡೆಸಿ ಅವರು ಎಚ್ಚರಿಸಿದರು.

ನಗರದ ಕೆಲ ಅಭಿವೃದ್ಧಿ ಕಾಮಗಾರಿಗಳು, ವಿಲೆವಾರಿಯಾಗದ ಕಡತಗಳು, ಸಿಬ್ಬಂದಿ ಕೊರತೆ, ಗುತ್ತಿಗೆದಾರರ ಬಾಕಿ ಬಿಲ್ ಮೊತ್ತದ ಹಣ ಬಿಡುಗಡೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪೌರಾಯುಕ್ತರಿಗೆ ಕೆಲ ನಿರ್ದೇಶನ ನೀಡಿದರು.

ದಾಂಡೇಲಿ ಬೆಳೆಯುತ್ತಿರುವ ನಗರವಾಗಿದ್ದು, ಪ್ರವಾಸೋದ್ಯಮಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಗರದ ಸುತ್ತಮುತ್ತಲಿನ ಪ್ರದೇಶ, ಹೋಟೆಲ್, ರೆಸಾರ್ಟ್​ಗಳು, ತಿಂಡಿ ತಿನಿಸಿನ ಚಿಕ್ಕ ಅಥವಾ ಕೈಗಾಡಿಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ತಡೆಗಟ್ಟಲು ಗುಣಮಟ್ಟದ ಸೇವೆಗಾಗಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು, ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಒಳಗೊಂಡ ಆಕಸ್ಮಿಕ ತಪಾಸಣೆ ತಂಡ ರಚಿಸಲಾಗುವುದು ಎಂದು ಎಚ್ಚರಿಸಿದರು.

ನಗರದಲ್ಲಿ ಯುಜಿಡಿ ಕಾಮಗಾರಿ ನಂತರ ಹೌಸ್ ಸರ್ವಿಸ್ ಕನೆಕ್ಷನ್ ಅಂದರೆ ಮನೆಗೆ ಮನೆಗೆ ಚರಂಡಿ ಪೈಪ್​ಲೈನ್ ಜೋಡಣೆಗೆ ನಗರಸಭೆ ಸದಸ್ಯರು ಸಭೆ ನಡೆಸಬೇಕು. ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬಂದು ಸಾರ್ವಜನಿಕರಿಂದ ಪಡೆಯಬೇಕಾದ ದರ ನಿಗದಿಪಡಿಸಲು ಮತ್ತು ಗುತ್ತಿಗೆದಾರರನ್ನು ಕರೆಯಿಸಿ ಜಿ+2 ಮನೆಗಳ ಕಾಮಗಾರಿ ಮುಗಿಸಿ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ಕಾರವಾರದ ಸಹಾಯಕ ಕಮೀಷನರ್ ವಿಜಯಲಕ್ಷ್ಮಿ ರಾಯಕೋಡ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಸದಸ್ಯರು, ಇತರ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಸದಸ್ಯರಾದ ನಂದೀಶ ಮುಂಗರವಾಡಿ, ಆಸೀಫ್ ಮುಜಾವರ, ಸಂಜಯ ನಂದ್ಯಾಳಕರ, ಬುದವಂತಗೌಡಾ ಪಾಟೀಲ, ಪದ್ಮಜಾ ಜನ್ನು, ವೆಂಕಟರಮಣ ಮೈತಕುರಿ, ರುಕ್ಮಿಣಿ ಬಾಗಡೆ, ಸರಸ್ವತಿ ರಜಪೂತ ಅವರು ನಗರಸಭೆಯಲ್ಲಿ ತೆರಿಗೆ ವಸೂಲಿ ಸರಿಯಾಗಿ ಆಗುತ್ತಿಲ್ಲ, ಉತಾರ ಪಡೆಯುವ ಹಾಗೂ ಇತರ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿದರು. ಮತ್ತು ಉಳಿದ ಸ್ಲಂಬೋರ್ಡ್ ಮನೆಗಳ ಹಂಚಿಕೆಗೆ ಫಲಾನುಭವಿಗಳನ್ನು ಗುರುರಿಸಬೇಕು ಎಂದು ವಿನಂತಿಸಿದರು.

ನಗರಸಭೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರ ಬಾಕಿ ಬಿಲ್ ಹಣವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆನರಾ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಾನಕರ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net