ಅರ್ಜಿ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಜಿಲ್ಲಾಧಿಕಾರಿ ಡಾ.ಕುಮಾರ ತರಾಟೆ

DC visits Taluk office Mandya
Published on

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂತೆಯೇ ಸಾರ್ವಜನಿಕರ ಅಹವಾಲು ಆಲಿಸಿ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.

ತಾಲೂಕು ಕಚೇರಿ ರೆಕಾರ್ಡ್ ರೂಂನಲ್ಲಿನ 1,291ಅರ್ಜಿ ಪೈಕಿ 900 ಅರ್ಜಿಯನ್ನು ಮ್ಯಾನುಯಲ್ ಹಾಗೂ 300 ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ಇನ್ನು ಮುಂದೆ ಯಾವುದೇ ಅರ್ಜಿಗಳನ್ನೂ ಮ್ಯಾನುವಲ್ ಆಗಿ ನಿರ್ವಹಣೆ ಮಾಡದಂತೆ ಕ್ರಮ ವಹಿಸಲು ಗ್ರೇಡ್-2 ತಹಸೀಲ್ದಾರ್ ಮತ್ತು ಶಿರಸ್ತೇದಾರ್‌ಗೆ ತಿಳಿಸಿದರು.

ಟಪಾಲು ವಿಭಾಗದಲ್ಲಿ 224 ಅರ್ಜಿ ಇದ್ದು, ಈ ಪೈಕಿ 172 ಅರ್ಜಿ 60 ದಿನಗಳ ಮೇಲ್ಪಟ್ಟ ಕಡತಗಳನ್ನು ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ನೀಡಲು ಹಾಗೂ ನಿಗದಿತ ಸಮಯದಲ್ಲಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು. ಅರ್ಜಿದಾರರಿಂದ ಈ ಆಫೀಸ್‌ನಲ್ಲಿ ಸ್ವೀಕೃತಗೊಂಡ ಕಡತಗಳನ್ನು ನಿಗದಿತ ಕಾಲ ಮಿತಿಯೊಳಗೆ ವಿಷಯ ನಿರ್ವಾಹಕರಿಗೆ ನೀಡಲು ಹಾಗೂ ಸೂಕ್ತ ಕ್ರಮ ವಹಿಸಬೇಕು. ಕಚೇರಿಗೆ ಬರುವ ಸಾರ್ವಜನಿಕ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್ ಇತರರಿದ್ದರು.

ಮಳವಳ್ಳಿಗೆ ಭೇಟಿ: ಬುಧವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಳವಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿ ಸ್ವೀಕರಿಸಿ ನಿಗದಿತ ಅವಧಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಪಾಲು ಶಾಖೆಗೆ ಭೇಟಿ ನೀಡಿ ಸ್ವೀಕೃತವಾಗಿದ್ದ ಅರ್ಜಿ ಬಗ್ಗೆ ಪರಿಶೀಲನೆ ನಡೆಸಿದರು. ಪ್ರತಿ ಅರ್ಜಿಯನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ರವಾನಿಸುತ್ತಿರುವ ಬಗ್ಗೆ ಪರಿಶೀಲಿಸಿಕೊಂಡು, ಯಾವುದೇ ಅರ್ಜಿ ಭೌತಿಕವಾಗಿ ಮಂಡನೆಯಾಗದಂತೆ ಕ್ರಮ ವಹಿಸಬೇಕೆಂದರು. ಅಭಿಲೇಖಾಯ ಶಾಖೆಗೆ ಭೇಟಿ ನೀಡಿ ಎ, ಬಿ, ಸಿ, ಡಿ ಹಾಗೂ ಇ ವರ್ಗವಾರು ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಹಾಗೂ ಕಾಲಕಾಲಕ್ಕೆ ಕಡತಗಳನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿದರು. ಅಭಿಲೇಖಾಲಯ ಶಾಖೆಯಲ್ಲಿ ಸ್ವೀಕೃತವಾದ ಅರ್ಜಿಗಳ ಬಗ್ಗೆ ಮಾಹಿತಿ ಪಡೆದು ಯಾವುದೇ ಕಾರಣವನ್ನೂ ನೀಡದೇ ಭೌತಿಕವಾಗಿ ದಾಖಲೆಗಳನ್ನು ವಿತರಿಸದಂತೆ ಸೂಚನೆ ನೀಡಿದರು. ತಂತ್ರಾಂಶದ ಮೂಲಕವೇ ಡಿಜಿಟಲ್ ದಾಖಲೆ ನೀಡಬೇಕು ಎಂದರು.

ಮಾತ್ರವಲ್ಲದೆ ಕಚೇರಿಯ ಎಲ್ಲ ಶಾಖೆಗಳಿಗೂ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಮೇಲ್ಮಟ್ಟದ ಯಾವುದೇ ಕಚೇರಿಗಳಿಂದ ಕೋರುವ ಯಾವುದೇ ಮಾಹಿತಿಗೆ ವಿಳಂಬ ಮಾಡದೇ ನೀಡಬೇಕು. ವಂಶವೃಕ್ಷ ಮತ್ತು ಆರ್‌ಟಿಸಿ ವಿತರಣೆ ಮಾಡುವಲ್ಲಿ ಯಾವುದೇ ವಿಳಂಬ ಮಾಡಬಾರದು. ಕಂದಾಯ ಇಲಾಖೆಯ ಸೇವೆಗಳು ಶೀಘ್ರವಾಗಿ ಹಾಗೂ ನ್ಯಾಯಸಮ್ಮತವಾಗಿ ಸಾರ್ವಜನಿಕರಿಗೆ ತಲುಪುವಲ್ಲಿ ಶ್ರಮಿಸುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net