

ರಾಯಚೂರು ನಗರದ ಒಪೆಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ನಿತೀಶ್ ಕೆ., ಬುಧವಾರ ಸಂಜೆ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ಟ್ರಾಮಾ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಟ್ಟಡ ನಿರ್ಮಾಣ ಕಾರ್ಯವನ್ನು ವೇಗಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ನಂತರ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ವಿಶೇಷ ತಜ್ಞ ವೈದ್ಯರ ಜತೆಗೆ ಚರ್ಚಿಸಿ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ರೀತಿಯಲ್ಲಿ ಚಿಕಿತ್ಸೆ ಸಿಗಬೇಕು. ಜನರಿಗೆ ಎಲ್ಲಾ ರೀತಿಯಲ್ಲಿ ಅನುಕೂಲವಾಗುವ ಹಾಗೆ ಹೊಸ ವಿಭಾಗಗಳನ್ನು ಸಹ ಆರಂಭಿಸಲು ಕ್ರಮವಹಿಸಬೇಕು ಸೂಚನೆ ನೀಡಿದರು.
ಇದೀಗ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಹೀಗಾಗಿ ಜನತೆಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುವಂತೆ ಒಪೆಕ್ ಆಸ್ಪತ್ರೆಯಲ್ಲಿನ ಕಾರ್ಡಿಯಾಲಜಿ ವಿಭಾಗವನ್ನು ಬೇಗನೇ ಬಲಪಡಿಸಲು ಕ್ರಮವಹಿಸಬೇಕು.
ಆಸ್ಪತ್ರೆಯಲ್ಲಿ ಉತ್ತಮವಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ ಎಂಬುದರ ಬಗ್ಗೆ ಜನತೆಗೆ ಮಾಹಿತಿ ರವಾನೆಯಾಗಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಸರ್ಕಾರಿ ಅಥವಾ ಖಾಸಗಿ ವೈದ್ಯರು ರೋಗಿಯನ್ನು ಒಪೆಕ್ ಆಸ್ಪತ್ರೆಗೆ ಹೋಗುವಂತೆ ಸಲಹೆ ಮಾಡಬೇಕು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಒಪೆಕ್ ಆಸ್ಪತ್ರೆಯ ನಿರ್ದೇಶಕ ಡಾ.ರಮೇಶ ಬಿ ಎಚ್, ವಿಶೇಷ ಅಧಿಕಾರಿ ಡಾ.ರಮೇಶ ಸಿ ಸಾಗರ, ಮುಖ್ಯ ಆಡಳಿತಾಧಿಕಾರಿ ನೀಲಪ್ರಭಾ, ಡಿಎಚ್‌ಓ ಡಾ.ಸುರೇಂದ್ರಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯಶಂಕರ ಸೇರಿದಂತೆ ಇತರರು ಇದ್ದರು.