ಮುದ್ದೇಬಿಹಾಳ-ತಾಳಿಕೋಟೆಗೆ ಡಿಸಿ ಭೇಟಿ, ತಾಲೂಕಾಡಳಿತದ ಕಾರ್ಯವೈಖರಿ ಪರಿಶೀಲನೆ

DC VISIT TALIKOTE
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನೂತನ ಜಿಲ್ಲಾಧಿಕಾರಿ ಡಾ. ಆನಂದ ಕೆ ತಾಲೂಕು ಆಡಳಿತದ ಕಾರ್ಯವೈಖರಿ ಪರಿಶೀಲಿಸಿದರು. ತಹಸೀಲ್ದಾರ್ ಎ.ಡಿ. ಅಮರಾವಡಗಿ, ಮಲ್ಲನಗೌಡ ಬಿರಾದಾರ, ಸತೀಶ ತಿವಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ನೂತನ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಬುಧವಾರ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ, ತಾಲೂಕು ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲಿಸಿದರು.

ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ್ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ ಪ್ರಗತಿ ಮಾಹಿತಿ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂಸುರಕ್ಷಾ ಯೋಜನೆಯ ಪ್ರಗತಿ ಸಾಧಿಸಬೇಕು. ದಾಖಲೆಗಳನ್ನು ಸಮರ್ಪಕವಾಗಿ ದಾಖಲೀಕರಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಮುದ್ದೇಬಿಹಾಳ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುದ್ದೇಬಿಹಾಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ಅಗತ್ಯ ಮೂಲ ಸೌಲಭ್ಯ ಖಚಿತಪಡಿಸಿಕೊಳ್ಳಬೇಕು. ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.

ತಾಳಿಕೋಟಿಯ ಹಳೆಯ ಪುರಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮುದ್ದೇಬಿಹಾಳ ತಹಸೀಲ್ದಾರ್ ಎ.ಡಿ. ಅಮರಾವಡಗಿ, ತಾಳಿಕೋಟಿ ತಹಸೀಲ್ದಾರ್ ವಿನಯಾ ಹೂಗಾರ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಆಸ್ಪತ್ರೆಯ ವೈದ್ಯ ಸತೀಶ ತಿವಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net