

ಕೋಲಾರ: ಪಿಪಿಇ ಕಿಟ್ ಧರಿಸಿ ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 114 ಸೋಂಕಿತರನ್ನು ಮಾತನಾಡಿಸಿ ಸಮಸ್ಯೆ, ಅಭಿಪ್ರಾಯ ಆಲಿಸಿದರು.
ಆಸ್ಪತ್ರೆಯಲ್ಲಿನ ಸೌಲಭ್ಯ ಕುರಿತು ಖುದ್ದು ಪರಿಶೀಲನೆಗಾಗಿ ಬೆಳಗ್ಗೆ 9ಕ್ಕೆ ಆಗಮಿಸಿದ ಡಿಸಿ, ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿದರಲ್ಲದೆ ಆಸ್ಪತ್ರೆಯಲ್ಲಿನ ಸೌಲಭ್ಯ, ಚಿಕಿತ್ಸೆ, ಏನೇನು ಸಮಸ್ಯೆಗಳಿವೆ ಎಂಬ ಬಗ್ಗೆ ದಾಖಲಾಗಿರುವ 114 ಮಂದಿಯ ಯೋಗಕ್ಷೇಮ ವಿಚಾರಿಸಿ ಅಭಿಪ್ರಾಯ ಕಲೆಹಾಕಿ ವಾಪಸ್ ಬರುವಾಗ 11 ಗಂಟೆ ಕಳೆದಿತ್ತು. ಡಿಎಚ್‌ಒ ಡಾ.ಎಸ್.ಎನ್.ವಿಜಯ್‌ಕುಮಾರ್, ಜಿಲ್ಲಾ ಸರ್ಜನ್ ಡಾ. ಎಸ್.ಜಿ. ನಾರಾಯಣಸ್ವಾಮಿ, ಡಾ.ಪ್ರಭಾಕರ್ ಸೇರಿ ಕರೊನಾ ಸೋಂಕಿತರನ್ನು ಉಚಪರಿಸುತ್ತಿರುವ ವೈದ್ಯ, ಸಿಬ್ಬಂದಿ ಅವರಿಗೆ ಸಾಥ್ ನೀಡಿದರು.
ಸಣ್ಣ-ಪುಟ್ಟ ಸಮಸ್ಯೆ: ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ಸಿ.ಸತ್ಯಭಾಮ, ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿರುವ ಬಗ್ಗೆ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಆಕ್ಸಿಜನ್ ಘಟಕದಿಂದ 185 ಬೆಡ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರದ ವ್ಯವಸ್ಥೆಯಿದೆ. ಕೊರತೆ ಇರುವ ಔಷಧಗಳನ್ನು ಕೂಡಲೆ ಒದಗಿಸಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟು ಸೌಲಭ್ಯ ಇರುವುದು ಸಂತಸ ತಂದಿದೆ ಎಂದರು.
ಆಸ್ಪತ್ರೆಗೆ ಬಾಗೇಪಲ್ಲಿ, ನೆರೆಯ ಚಿತ್ತೂರು ಸೇರಿ ಬೇರೆ ಬೇರೆ ಭಾಗದ ರೋಗಿಗಳು ದಾಖಲಾಗಿದ್ದಾರೆ. ಎರಡ್ಮೂರು ವಾರ್ಡ್‌ಗಳ ದುರಸ್ತಿ, ಶೌಚಗೃಹ, ನೆಲಹಾಸು, ಗೇಟ್ ವ್ಯವಸ್ಥೆ ಸೇರಿ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಉಳಿದೆಲ್ಲ ಸಮರ್ಪಕವಾಗಿವೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಸ್ವಚ್ಛ ಶನಿವಾರ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಸುಲಭವಲ್ಲ, ನಾವು 2 ಗಂಟೆ ಅವಧಿಗೇ ಇಷ್ಟು ಬೆವೆತಿದ್ದೇವೆ, ಐದಾರು ಗಂಟೆ ಕೆಲಸ ಮಾಡುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಬೇಕು. ಸ್ವಚ್ಛತೆಗೆ ಸಿಬ್ಬಂದಿ ಶ್ರಮವೂ ಸಾಕಷ್ಟಿದೆ. ಒಟ್ಟಾರೆ ಇವರೆಲ್ಲರೂ ದೇವರಿದ್ದಂತೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಉತ್ತಮವಾಗಿದ್ದರೂ ರೋಗಿಗಳ ಕಡೆಯವರು ಪ್ರೀತಿಯಿಂದ ಮನೆ ಊಟ ತಂದು ಕೊಡುತ್ತಿದ್ದಾರೆ. ಯಾವುದೇ ರೋಗಿಯೂ ಊಟದ ಬಗ್ಗೆ ದೂರಿಲ್ಲ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 4867 ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ.13 ವರ್ಷದೊಳಗಿನ 167 ಮಕ್ಕಳು, 94 ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದಾರೆ. ಈಗಿರುವ 147 ಮಂದಿ ಪೈಕಿ 27 ಮಂದಿ ಐಸಿಯುನಲ್ಲಿದ್ದಾರೆ. ಈವರೆಗೆ 60-65 ವರ್ಷ ಮೇಲ್ಪಟ್ಟ 31 ಮಂದಿ ಮೃತಪಟ್ಟಿದ್ದು, ಕಿಡ್ನಿ, ಮಧುಮೇಹ, ಕ್ಯಾನ್ಸರ್ ಇನ್ನಿತರ ರೋಗಗಳಿಂದ ಬಳಲುತ್ತಿದ್ದರು ಎಂದರು.
ಕರೊನಾ ಪಾಸಿಟಿವ್, ಸೋಂಕಿನ ಲಕ್ಷಣ ಇದ್ದರೂ ಅಥವಾ ಯಾವುದೆ ಇನ್ನಿತರ ಕಾಯಿಲೆ ಇದ್ದರೂ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಖಾಸಗಿ ಆಂಬುಲೆನ್ಸ್ ಬಳಸುವಂತಾಗಿದೆ ಎಂಬ ದೂರು ಸಿಬ್ಬಂದಿ ಸಮಸ್ಯೆಯಿಂದ ಆಗಿರಬಹುದು. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು, ಸಿ. ಸತ್ಯಭಾಮ, ಜಿಲ್ಲಾಧಿಕಾರಿ