ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಡಾ.ಎಚ್.ಎನ್.ಗೋಪಾಲಕೃಷ್ಣ

IMG_20230414_125358
Published on

ನಾಗಮಂಗಲ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕೆಲವು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಮೈಸೂರು ರಸ್ತೆಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು. ಮತಗಟ್ಟೆಗಳಲ್ಲಿ ಅಂಗವಿಕಲರನ್ನು ಕರೆತರಲು ವ್ಹೀಲ್‌ಚೇರ್ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಹಾಗೂ ಮತಗಟ್ಟೆಯಲ್ಲಿ ವಿದ್ಯುತ್ ಅಥವಾ ಬೆಳಕಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಹಗಲಿನ ವೇಳೆ ವಾಹನಗಳ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಚುನಾವಣಾಧಿಕಾರಿಗೆ ಈ ಸಂಬಂಧ ಕ್ರಮವಹಿಸುವಂತೆ ಸೂಚಿಸಲಾಗಿದೆ. ಹೊಸ ಸೇರ್ಪಡೆ ಮತದಾರರ ಕಾರ್ಡುಗಳನ್ನು 2-3 ದಿನಗಳೊಳಗೆ ಸಂಪೂರ್ಣವಾಗಿ ಸಂಬಂಧಿಸಿದ ಮತದಾರರ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುವುದು. ಶೇ.100 ಮತದಾನವಾಗುವಂತೆ ಅಧಿಕಾರಿಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಆಮಿಷ ನೀಡುವುದು, ಹಣ ಹಂಚಿಕೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಚುನಾವಣಾ ಸಿಬ್ಬಂದಿಗೆ ತಿಳಿಸುವಂತೆ ಮನವಿ ಮಾಡಿದರು.

ಚುನಾವಣಾ ಶಾಖೆಗೆ ಭೇಟಿ: ಮತಗಟ್ಟೆಗಳಿಂದ ತಾಲೂಕು ಆಡಳಿತಸೌಧಕ್ಕೆ ಭೇಟಿ ನೀಡಿ ಚುನಾವಣಾ ಶಾಖೆ, ಸಹಾಯವಾಣಿ ಕೊಠಡಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಕ್ರಂ ಅಲಿ, ತಹಸೀಲ್ದಾರ್ ನಯೀಂ ಉನ್ನಿಸಾ, ಸಿಪಿಐ ನಿರಂಜನ್, ಗ್ರೇಡ್-2 ತಹಸೀಲ್ದಾರ್ ಸ್ವಾಮಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net