ವೈದ್ಯರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ

udp̲̲̲̲-7-ADARSHA 1
Published on

ಉಡುಪಿ: ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ. ಜೀವ ಉಳಿಸುವ ವೈದ್ಯರು ಹಾಗೂ ಜೀವನ ರೂಪಿಸುವ ಶಿಕ್ಷಕರು ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾತ್ರೆ ಔಷಧಕ್ಕಿಂತಲೂ ತಾಯಿ ಸ್ಪರ್ಶ ಮತ್ತು ಭರವಸೆಯ ಮಾತುಗಳಿಂದ ರೋಗಿಯ ಶೇ. ೫೦ರಷ್ಟು ರೋಗ ಗುಣಮುಖವಾಗುತ್ತದೆ. ಹೀಗಾಗಿ ವೈದ್ಯರು ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ವೈದ್ಯರ ದಿನದ ಪ್ರಯುಕ್ತ ಆದರ್ಶ ಆಸ್ಪತ್ರೆಯಲ್ಲಿ ಭಾನುವಾರ ಸಾಧಕ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ವ್ಯಕ್ತಿಯ ಸೇವೆ ಗುರುತಿಸಿದಾಗ ಸಮಾಜಕ್ಕೆ ಪ್ರೇರಣೆಯಾಗುತ್ತದೆ. ವೈದ್ಯರಿಗೆ ಸನ್ಮಾನ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಈ ವೃತ್ತಿಗೆ ಬರುವವರಿಗೆ ಮಾದರಿ ವ್ಯಕ್ತಿತ್ವ ಪರಿಚಯಿಸಿದಂತಾಗುತ್ತದೆ.  ವೈದ್ಯರು ಮತ್ತು ದಾದಿಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸವಾಲಿನ ರೀತಿ ಹೊಸ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ನಿಭಾಯಸುವ ಶಕ್ತಿ ವೈದ್ಯರಿಗೆ ದೊರೆಯಲಿ ಎಂದು ಆಶಿಸಿದರು.

ಸನ್ಮಾನ

ಕಾಪು ಪ್ರಶಾಂತ್ ಅಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ಮಲ್ಪೆಯ ದೇವ್ ಕ್ಲಿನಿಕ್‌ನ ಡಾ. ರಾಮಚಂದ್ರ ದೇವಾಡಿಗ, ಬ್ರಹ್ಮಾವರದ ಡಾ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಕಳ  ತಾಲೂಕು ಸರ್ಕಾರಿ ಆಸ್ಪತ್ರೆಯ ರೇಡಿಯಾಲಾಜಿಸ್ಟ್ ಡಾ. ಅನಿತಾ ಎಸ್. ಪ್ರಭು ಹಾಗೂ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ. ಚಂದ್ರ ಮರಕಾಲ ಇವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ವಿಶೇಷ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಡಿಎಚ್‌ಒ ಡಾ. ಐ.ಪಿ. ಗಡಾದ್‌, ಜಿಲ್ಲಾ ಸರ್ಜನ್‌ ಡಾ. ಅಶೋಕ್‌ ಎಚ್.‌, ಮಾತನಾಡಿದರು. ಆದರ್ಶ ಆಸ್ಪತ್ರೆ ಸಿಇಒ ವಿಮಲಾ ಚಂದ್ರಶೇಖರ್‌, ಹಿರಿಯ ವೈದ್ಯ ಡಾ. ಮೋಹನದಾಸ್‌ ಶೆಟ್ಟಿ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್‌ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ‌ಆಸ್ಪತ್ರೆ ಡಯಟೀಶನ್‌ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆ ಉಪಪ್ರಬಂಧಕ ಪ್ರಕಾಶ್‌ ಡಿ.ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net