

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ನೂತನ ಡಿಸಿಯಾಗಿ ಪ್ರಸ್ತುತ ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ.ರಾಜೇಂದ್ರ ಕೆ.ವಿ. ಜಿಲ್ಲೆಗೆ ಬರಲಿದ್ದಾರೆ.
ಹಿಂದಿನ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ ನೀಡಿದ ಬಳಿಕ ಉಡುಪಿಯಲ್ಲಿ ಜಿಪಂ ಸಿಇಒ ಆಗಿದ್ದ ಸಿಂಧೂ ಅವರನ್ನು ತಕ್ಷಣಕ್ಕೆ ಪದೋನ್ನತಿಯೊಂದಿಗೆ ದ.ಕ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು. ಕಳೆದ ಸೆ.8ರಂದು ಅಧಿಕಾರ ವಹಿಸಿಕೊಂಡಿದ್ದರು. ವರ್ಷ ಪೂರೈಸುವ ಮೊದಲೇ ಅವರು ವರ್ಗಾವಣೆಯಾಗಿ, ಇಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ ಮತ್ತು ಇ-ಗವರ್ನೆನ್ಸ್‌ನ ನಿರ್ದೇಶಕಿ ಹುದ್ದೆ ವಹಿಸಿಕೊಳ್ಳಲಿದ್ದಾರೆ. ನೂತನ ಡಿಸಿ ಇನ್ನೆರಡು ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಮೂಲತಃ ತೀರ್ಥಹಳ್ಳಿಯವರಾಗಿರುವ ಡಾ.ರಾಜೇಂದ್ರ, 2015ರಲ್ಲಿ ಪುತ್ತೂರು ಸಹಾಯಕ ಆಯುಕ್ತರಾಗಿದ್ದವರು. ದಾವಣಗೆರೆ ಬಾಪೂಜಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಗಳಿಸಿ ನಂತರ ಸಿವಿಲ್ ಸವೀಸಸ್ ಮೂಲಕ ಸಾರ್ವಜನಿಕ ಸೇವೆಗೆ ಬಂದವರು. ರಾಜ್ಯದಲ್ಲೇ ಅಧಿಕ ಕೋವಿಡ್ ಪ್ರಕರಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ವೈದ್ಯಕೀಯ ಅರಿವು ಇರುವವರೇ ಜಿಲ್ಲಾಧಿಕಾರಿಯಾಗಿ ಬರುತ್ತಿದ್ದಾರೆ.