ಡಿಸಿಯಿಂದ ನಗರದ ಪ್ರದಕ್ಷಿಣೆ; ಕಾಮಗಾರಿಗಳ ಪರಿಶೀಲನೆ

DC CITY ROUNDS
Published on

ವಿಜಯಪುರ: ನಗರದ ವಿವಿಧೆಡೆ ಕೈಗೊಂಡಿರುವ ಕಾಮಗಾರಿ ಹಾಗೂ ಅತಿಕ್ರಮಣವಾಗಿರುವ ಸ್ಥಳಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ಗುರುವಾರ ನೀಡಿ ಪರಿಶೀಲನೆ ನಡೆಸಿದರು.

ತಹಸೀಲ್ದಾರ್ ಕಚೇರಿ ಹಿಂಭಾಗದ ಖಾಲಿ ಜಾಗವನ್ನು ಪರಿಶೀಲನೆ ನಡೆಸಿದ ಅವರು, ಅಲ್ಲಿರುವ ತಗ್ಗು ಗುಂಡಿಗಳನ್ನು ದುರಸ್ತಿಗೊಳಿಸಿ, ಸಮತಟ್ಟುಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ನಗರದಾದ್ಯಂತ ವಿವಿಧೆಡೆ 10 ಸಾವಿರ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ವಲಯಕ್ಕೆ ಕ್ರಮ ವಹಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ರಿಂಗ್ ರಸ್ತೆಯ ನೇತಾಜಿ ಸುಭಾಷಚಂದ್ರ ಭೋಸ್ ವೃತ್ತದಿಂದ ಸೋಲಾಪುರ ರಾಷ್ಟ್ರೀಯ ಹೆದ್ದಾರಿವರೆಗೆ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ನಗರದ ದರ್ಗಾ ರಸ್ತೆಯಲ್ಲಿ ಸೋಲಾಪುರ ಹಳೆಯ ಬೈಪಾಸ್‌ದಿಂದ ದರ್ಗಾ (ಇಟ್ಟಂಗಿಹಾಳ) ರಸ್ತೆವರೆಗೆ ಮುಖ್ಯ ರಸ್ತೆಯಲ್ಲಿರುವ ಅನಧಿಕೃತ- ಒತ್ತುವರಿಯಾಗಿರುವ ಕಟ್ಟಡ-ಶೆಡ್‌ಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ವಿಜಯಪುರ ನಗರದ ಆಶ್ರಮಗೆ ಹೋಗುವ ಮುಖ್ಯ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು, ಶೆಡ್‌ಗಳನ್ನು ತೆರವುಗೊಳಿಸಲು ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಅವರು ಸೂಚನೆ ನೀಡಿದರು.

ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net