ವಿಶ್ವ ಯೋಗ ದಿನ ಆಚರಣೆಗೆ ಸಜ್ಜಾಗಿ, ಅಧಿಕಾರಿಗಳಿಗೆ ಡಿಸಿ ಟಿ.ಭೂಬಾಲನ್ ಸೂಚನೆ

DC MEETING YOGA DAY
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ ಮಾರಿಹಾಳ, ಶಿವಾನಂದ ಮಾಸ್ತಿಹೊಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಜೂ.21 ರಂದು ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 11ನೇ ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಯೋಗ ಸಂಗಮ, ಯೋಗ ಧನುಷ, ಹಸಿರು ಯೋಗ (ಹರಿತ್ ಯೋಗ) ಹಾಗೂ ಯೋಗ ಪಾರ್ಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಿಂದಗಿ ತಾಲೂಕಿನ ಕೆರೂಟಗಿಯ ಆಯುಷ್ಮಾನ ಆರೋಗ್ಯ ಮಂದಿರದಲ್ಲಿ ಯೋಗ ತರಬೇತುದಾರರನ್ನೊಳಗೊಂಡ ಯೋಗ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಯಶಸ್ವಿ ಯೋಗ ದಿನಾಚರಣೆ ಕಾರ್ಯಕ್ರಮಕ್ಕಾಗಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತಾ ವ್ಯವಸ್ಥೆ, ಕ್ರೀಡಾಂಗಣದ ಸ್ವಚ್ಛತೆ, ಆಂಬುಲೆನ್ಸ್ ವ್ಯವಸ್ಥೆ, ಯೋಗ ತರಬೇತಿದಾರರ ವ್ಯವಸ್ಥೆ, ಆಯುಷ್ ಪದ್ಧತಿ ತಿಳಿವಳಿಕೆಗೆ ಓರ್ವ ವೈದ್ಯರ ನಿಯೋಜನೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಖೈದಿಗಳು, ನ್ಯಾಯಾಲಯ, ಸರ್ಕಾರಿ ಕಚೇರಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಸಿಬ್ಬಂದಿಗೆ 10 ರಿಂದ 15 ನಿಮಿಷಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಸಿರು ಯೋಗ( ಹರಿತ್ ಯೋಗ) ಕಾರ್ಯಕ್ರಮಗಳಲ್ಲಿ ಎನ್‌ಎಸ್‌ಎಸ್, ಸ್ಕೌಟ್ ಆಂಡ್ ಗೈಡ್ಸ್, ಎನ್‌ಸಿಸಿ, ಅರಣ್ಯ ಇಲಾಖೆ, ಸರ್ಕಾರಿ ಕಚೇರಿಗಳು, ಸರ್ಕಾರೇತರ ಕಚೇರಿಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ದಿಷ್ಟ ಪಡಿಸಿದ ಸ್ಥಳಗಳಲ್ಲಿ ಯೋಗಭ್ಯಾಸ ನಂತರ ಶ್ರಮದಾನ, ಸ್ವಚ್ಚತಾ ಅಭಿಯಾನ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ಸೂಚಿಸಿದರು.

ಕಾರ್ಯಕ್ರಮದ ದಿನದಂದು ಪೊಲೀಸರ ನಿಯೋಜನೆ, ಕ್ರೀಡಾಂಗಣವನ್ನು ಸ್ವಚ್ಚಗೊಳಿಸುವುದು, ಅಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಸ್ಕೌಟ್ ಆಂಡ್ ಗೈಡ್ಸ್, ಎನ್‌ಸಿಸಿ, ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಬೇಕು. ಕಾರ್ಯಕ್ರಮದ ವೇಳೆ ಮಳೆ ಬಂದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಪತಂಜಲಿ ಹಾಗೂ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಆಯೋಜಿಸಬೇಕು. ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಗಾಗಿ ಸಂಸ್ಥೆಯವರು ನಿಗದಿ ಪಡಿಸಿದ ದಿನಾಂಕದಂದು ಬೆಳಗ್ಗೆ 9ಕ್ಕೆ ಆಯುಷ್ ಇಲಾಖೆಯ ವತಿಯಿಂದ ಒಬ್ಬ ಯೋಗ ಶಿಕ್ಷಕರನ್ನು ಕಳುಹಿಸಿ 20 ನಿಮಿಷ ಯೋಗಭ್ಯಾಸ ಆಯೋಜಿಸುವುದು, ಸ್ಕೌಟ್ ಆಂಡ್ ಗೈಡ್ಸ್, ಯೋಗ ಶಿಕ್ಷಕ ಹಾಗೂ ಆಯುಷ್ ಪದ್ಧತಿಯ ತಿಳಿವಳಿಕೆಗಾಗಿ ಒಬ್ಬ ವೈದ್ಯರನ್ನು ನಿಯೋಜಿಸಿ 20 ನಿಮಿಷಗಳ ಕಾಲ ಯೋಗ ಆಚರಿಸುವುದು, ಕಾರಾಗೃಹ ಅಧೀಕ್ಷಕರು, ಜಿಲ್ಲಾ ಬಂದಿಖಾನೆಯಲ್ಲಿ ಇಲಾಖೆಯ ವತಿಯಿಂದ ಯೋಗ ಧನುಷ್ ಕಾರ್ಯಕ್ರಮದಲ್ಲಿ ಸಿಬ್ಬಂದಿ, ಖೈದಿಗಳಿಗ 30 ನಿಮಿಷಗಳ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ತಿಳಿಸಿದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ನಿಗದಿತ ಕಾರ್ಯಕ್ರಮಗಳನ್ನು ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಲ್ಪೋಪಹಾರ, ಶುದ್ಧ ಕುಡಿಯುವ ನೀರು, ಆಂಬುಲೆನ್ಸ್ ವ್ಯವಸ್ಥೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎಎಸ್‌ಪಿ ಶಂಕರ ಮಾರಿಹಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಹೊಸಮನಿ, ಆಯುಷ್ ಇಲಾಖೆಯ ಅಧಿಕಾರಿ ಡಾ.ವಿದ್ಯಾವತಿ ಅಥಣಿ, ಡಾ.ವಿ.ಬಿ. ದೇಸಾಯಿ, ಡಾ.ಬಸವರಾಜ ಒಗದುರ್ಗಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ಮಹಾವಿದ್ಯಾಲಯದ ಬಿಕೆ ಶೈಲಜಾ, ಡಾ.ರಿಷಿಕೇಶ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net