

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಮತ್ತು ಗೋವಾ ರಾಜ್ಯದ ನೌಕಾಪಡೆಯ ಎನ್ಸಿಸಿ ಕೆಡೆಟ್ಗಳು ಉಡುಪಿಯಿಂದು ಮಂಗಳೂರು ಬಂದರುವರೆಗೆ 15 ದಿನಗಳ ಕಾಲ ಸಾಗರ ನೌಕಾಯಾನ ಯಾತ್ರೆ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಈ ವಿಶೇಷ ಸ್ಪರ್ಧೆಗೆ ಸೋಮವಾರ (ಅ.6) ಚಾಲನೆ ನೀಡಿ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಬಿರದ ಸಹಾಯಕ ಮುಖ್ಯಸ್ಥೆ ಸಿಡಿಆರ್ ಲಿಬಿನ್ ಜಾನ್ಸನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ., ಸಿಡಿಎಫ್ ನಿರ್ದೇಶಕ ಡಾ. ವಿಜಯೇಂದ್ರ ರಾವ್, ಉಡುಪಿಯ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ಕೇಶವ್ ಉಪಸ್ಥಿತರಿದ್ದರು.
ಉಡುಪಿಯ ಉದ್ಯಾವರದ ಪಾಪನಾಶಿನಿ ನದಿಯಿಂದ ನೌಕಾಯಾನ ಆರಂಭಗೊಂಡಿದ್ದು, ಪಾಲ್ಗೊಂಡಿರುವ 72 ಕೆಡೆಟ್ಗಳು ಮಲ್ಪೆ ಬಂದರಿನ ಮೂಲಕ ಸಾಗರ ಸಂಪರ್ಕಗೊಂಡು ಪ್ರಯಾಣ ಕೈಗೊಂಡಿದ್ದಾರೆ. ದಕ್ಷಿಣ ದಿಕ್ಕಿನತ್ತ ಸಾಗಿ ಮೂಲ್ಕಿ, ಸುರತ್ಕಲ್ ಕರಾವಳಿ ಮಾರ್ಗವಾಗಿ ಸಾಗಿ ನವಮಂಗಳೂರು ಬಂದರಿನಲ್ಲಿ ಕೊನೆಗೊಳ್ಳುತ್ತದೆ. ಮತ್ತೆ ಅದೇ ಮಾರ್ಗವಾಗಿ ನೌಕಾಯಾನ ಹಿಂದಿರುಗಿ ಒಟ್ಟು 219 ಕಿಮೀ ಪ್ರಯಾಣಿಸಿ ಉಡುಪಿಗೆ ಮರಳಲಿದೆ. ಪ್ರತಿ ದೋಣಿಯಲ್ಲಿ ನಾಲ್ಕು ಹುಡುಗರು, ಇಬ್ಬರು ಹುಡುಗಿಯರು ಒಳಗೊಂಡ ಆರು ಕೆಡೆಟ್ಗಳ ತಂಡ ಇರಲಿದೆ. 27 ಅಡಿ ಉದ್ದದ ಮೂರು ಡಿಕೆ ವೇಲರ್ ಕ್ಲಾಸ್ ದೋಣಿ ಸಜ್ಜುಗೊಳಿಸಲಾಗಿದೆ. ಅ.15ಕ್ಕೆ ನೌಕಾಯಾನ ಪೂರ್ಣಗೊಳ್ಳಲಿದೆ.