

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ 1 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳನ್ನು ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಿಸಲು ಸರ್ಕಾರ ನಿರ್ದೇಶನ ನೀಡಿದೆ. ನಿಯಮಾನುಸಾರ ಪರಿಣಾಮಕಾರಿ ಲಾಕ್ಡೌನ್ ಮಾಡಲು ಕಂದಾಯ, ಪೊಲೀಸ್, ಆರೋಗ್ಯ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಕ್ಷಣದಿಂದಲೇ ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆಯ ತುರ್ತಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಎಲ್ಲ ಚೆಕ್ಪೋಸ್ಟ್ಗಳು ದಿನದ 24 ಗಂಟೆ ನಿರಂತರವಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಕಾರ್ಯ ಹಾಗೂ ಸ್ವಯಂಘೊಷಣಾ ಪ್ರಮಾಣಪತ್ರ ಪಡೆಯಬೇಕು. ಪೊಲೀಸರು ವಾಹನ ತಪಾಸಣೆ ಮತ್ತು ಪ್ರಯಾಣಿಕರ ಪ್ರವಾಸ ಹಿನ್ನೆಲೆ ವಿವರ ಸಂಗ್ರಹಿಸಬೇಕು. ತಲಾ 12 ಗಂಟೆಗಳ ಸರದಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಿದರು.
ವಿದೇಶಗಳಿಂದ ಬಂದಿರುವ ವ್ಯಕ್ತಿಗಳು ಹೊರಗೆ ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದರೆ ಬಹುತೇಕ ಖಚಿತತೆ ಇಲ್ಲ. ಅದನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನೊಳಗೊಂಡ ನೋಡಲ್ ಅಧಿಕಾರಿಗಳ ತಂಡವನ್ನು ನೇಮಿಸಲಾಗುವುದು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸರ್ಕಾರದ ಶಿಷ್ಟಾಚಾರ ಪಾಲಿಸಲು ಹೋಂ ಕ್ವಾರಂಟೈನ್ ಅವಧಿಯಲ್ಲಿ ಇರುವವರಿಗೆ ಕಟ್ಟುನಿಟ್ಟಾಗಿ ತಿಳಿಸಲು ತಂಡಗಳನ್ನು ರಚಿಸಬೇಕು. ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ಸೋಂಕು ದೃಢಪಟ್ಟಿರುವ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿರುವ ಬೀಟ್ ಪೊಲೀಸರು ಹೆಚ್ಚು ಜಾಗ್ರತರಾಗಿ ಕಾರ್ಯನಿರ್ವಹಿಸಬೇಕು. ಹೆಚ್ಚು ಅಪಾಯಕ್ಕೊಳಗಾಗಬಹುದಾದ ಸಾಧ್ಯತೆಗಳಿರುವ ಪ್ರದೇಶದಲ್ಲಿನ ವಿಚಕ್ಷಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದರು.
ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ, ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಹಸೀಲ್ದಾರರು ಹಾಜರಿದ್ದರು.
ಹವಾನಿಯಂತ್ರಿತ ವ್ಯವಸ್ಥೆ ನಿಷೇಧ: ಅಗತ್ಯ ಸೇವೆಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟನ್ನು ನಿರ್ದಾಕ್ಷಿಣ್ಯವಾಗಿ ಸ್ಥಗಿತಗೊಳಿಸಬೇಕು. ಹವಾನಿಯಂತ್ರಿತ ಸೌಕರ್ಯಗಳಿರುವ ಬಟ್ಟೆ, ಚಿನ್ನಾಭರಣ ಮತ್ತಿತರ ವಾಣಿಜ್ಯ ಮಳಿಗೆಗಳ ವಹಿವಾಟು ಯಾವುದೇ ಕಾರಣಕ್ಕೂ ನಡೆಯಬಾರದು. ಸರ್ಕಾರಿ ಕಚೇರಿಗಳಲ್ಲಿ 60 ವರ್ಷ ಮೀರಿದ ನಿವೃತ್ತರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅವರು ಕರ್ತವ್ಯಕ್ಕೆ ಹಾಜರಾಗದಿರಲು ತಿಳಿಸಬೇಕು. ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಮತ್ತಿಬ್ಬರ ವರದಿ ನೆಗೆಟಿವ್, 2 ಬಾಕಿ: ಧಾರವಾಡ ಜಿಲ್ಲೆಯ ಒಬ್ಬ ವ್ಯಕ್ತಿಯಲ್ಲಿ ಕರೊನಾ ವೈರಸ್ ಸೋಂಕು ಈಗಾಗಲೇ (ಭಾನುವಾರ) ದೃಢಪಟ್ಟಿದೆ. ಶಂಕಿತ ನಾಲ್ವರಲ್ಲಿ ಇಬ್ಬರ ವರದಿ ಸೋಮವಾರ ಸಂಜೆ ಜಿಲ್ಲಾಡಳಿತ ಕೈಗೆ ಸೇರಿದ್ದು, ಇಬ್ಬರದ್ದೂ ನೆಗೆಟಿವ್ (ಕರೊನಾ ಅಲ್ಲ) ಎಂದು ಖಾತ್ರಿಯಾಗಿದೆ. ಇದು ಕೊಂಚ ಸಮಾಧಾನದ ಸಂಗತಿಯಾಗಿದೆ.
ಇನ್ನೂ ಇಬ್ಬರು ಶಂಕಿತರ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 10 ಜನರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಪೈಕಿ ಒಟ್ಟು 7 ಜನರ ವೈದ್ಯಕೀಯ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿದೆ. ಭಾನುವಾರ ಕರೊನಾ ವೈರಸ್ ಸೋಂಕು ಖಾತ್ರಿಯಾಗಿರುವ ನಗರದ ಹೊಸಯಲ್ಲಾಪುರದ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ವರದಿ ಬಾಕಿ ಇರುವ ಇಬ್ಬರನ್ನು ಕಿಮ್್ಸ ಆಸ್ಪತ್ರೆಯ ಪ್ರತ್ಯೇಕ ಐಸೋ ಲೇಶನ್ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಭಾನುವಾರ ಸಂಜೆವರೆಗೆ 309 ಜನರ ಮೇಲೆ ನಿಗಾ ವಹಿಸಲಾಗಿತ್ತು. ಸೋಮವಾರ ಸಂಜೆ ವೇಳೆಗೆ ಈ ಸಂಖ್ಯೆ 362ಕ್ಕೆ ಏರಿದೆ. ಅಂದರೆ, ನಿಗಾದಲ್ಲಿ ಇರುವವರ ಸಂಖ್ಯೆ ಒಂದು ದಿನದಲ್ಲಿ 53 ಹೆಚ್ಚಾಗಿದೆ.
249 ಜನರಿಗೆ 14 ದಿನಗಳವರೆಗೆ ಮನೆಯಲ್ಲೇ ಪ್ರತ್ಯೇಕ ವಾಸ (ಐಸೋಲೇಶನ್) ಮುಂದುವರಿಸಲಾಗಿದೆ. ಭಾನುವಾರ ಸಂಜೆವರೆಗಿನ ಈ ಸಂಖ್ಯೆ 220 ಇತ್ತು. ಭಾನುವಾರ ಸಂಜೆವರೆಗೆ ಒಟ್ಟು 71 ಜನರು 14 ದಿನಗಳ ಪ್ರತ್ಯೇಕ ವಾಸ ಮುಗಿಸಿದ್ದರೆ, ಸೋಮವಾರ ಸಂಜೆ ಹೊತ್ತಿಗೆ ಈ ಸಂಖ್ಯೆ 97 ಆಗಿದೆ. ಇದುವರೆಗೆ ಒಟ್ಟು 14 ಜನರು 28 ದಿನಗಳ ಐಸೋಲೇಶನ್ ಮುಕ್ತಾಯಗೊಳಿಸಿದ್ದಾರೆ.
ನಿಯಮ ಪಾಲಿಸಲು ಶಾಸಕ ಬೆಲ್ಲದ ಮನವಿ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾ. 31ರವರೆಗೆ ಸರ್ಕಾರ ಸೂಚಿಸಿರುವಂತೆ ಎಲ್ಲ ಜನರು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅಂಗಡಿ ಮುಂಗಟ್ಟುಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ, ಮನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸೇವಕರಿಗೆ ಹಾಗೂ ಕಾರ್ವಿುಕರಿಗೆ ಅವರವರ ಮಾಲೀಕರು ಸಂಪೂರ್ಣ ವೇತನ ಸಹಿತ ಭತ್ಯೆ ನೀಡಿ ಮಾನವೀಯತೆ ಮೆರೆಯುವ ಮೂಲಕ ಪ್ರಸ್ತುತ ಅಗ್ನಿಪರೀಕ್ಷೆ ಎದುರಿಸಲು ಸಹಕರಿಸಬೇಕು ಎಂದು ಶಾಸಕ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಪ್ರತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.