ನಿರಾಶ್ರಿತ ಅಜ್ಜಿಗೆ ಆಶ್ರಯ ಕಲ್ಪಿಸಿದ ಡಿಸಿ: ಮಾನವೀಯತೆ ಮೆರೆದ ಕೋಮಲ್‌ಕುಮಾರ್

DC sheltered a homeless grandmother Mandya
Published on

ಮಂಡ್ಯ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಬಸ್ ಬೇ ನಲ್ಲಿ ಕಳೆದ ಮೂರ‌್ನಾಲ್ಕು ದಿನದಿಂದ ಅಸಹಾಯಕರಾಗಿ ಕುಳಿತಿದ್ದ ವೃದ್ಧೆಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್‌ಕುಮಾರ್ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಗಲು ರಾತ್ರಿಯೆನ್ನದೆ ಗಾಳಿ ಮತ್ತು ಮಳೆಯ ನಡುವೆಯೇ ವೃದ್ಧೆ ಕಾಲ ಕಳೆಯುತ್ತಿದ್ದರು. ಈ ಕುರಿತು ಕೆಇಬಿ ಸಿಬ್ಬಂದಿ ಸತೀಶ್ ಐಕನಹಳ್ಳಿ ಮಾಧ್ಯಮವರಿಗೆ ಮಾಹಿತಿ ನೀಡಿದರು. ನಂತರ ಮಾಧ್ಯಮದವರು ಜಿಲ್ಲಾಧಿಕಾರಿಗೆ ವಿವರ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಡಿಸಿ, ತುರ್ತು ಕ್ರಮ ವಹಿಸುವಂತೆ ಕೋಮಲ್‌ಕುಮಾರ್‌ಗೆ ಸೂಚನೆ ನೀಡಿದರು.

ಅದರಂತೆ ಸ್ಥಳಕ್ಕೆ ಆಗಮಿಸಿದ ಕೋಮಲ್‌ಕುಮಾರ್, ವೃದ್ಧೆಯೊಂದಿಗೆ ಕೆಲವೊತ್ತು ಮಾತುಕತೆ ನಡೆಸಿದರು. ನಂತರ ಊಟ ಕೊಡಿಸಿ ಆಕೆಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ವೃದ್ಧೆ ನೀಡಿದ ಮಾಹಿತಿ ಮೇರೆಗೆ ಆಕೆ ಹೇಳಿದ ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೃದ್ಧೆಯನ್ನು ನೋಡಿಕೊಳ್ಳುವವರು ಇಲ್ಲದ ಮಾಹಿತಿ ಹಿನ್ನೆಲೆಯಲ್ಲಿ ನಗರಕ್ಕೆ ವಾಪಸ್ ಕರೆದುಕೊಂಡು ಬಂದು ಜ್ಞಾನಸಿಂಧು ವೃದ್ಧಾಶ್ರಮಕ್ಕೆ ದಾಖಲಿಸಿ ಆಶ್ರಯ ಕಲ್ಪಿಸಲಾಗಿದೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಕೋಮಲ್‌ಕುಮಾರ್, ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದ ಮೇರೆಗೆ ವೃದ್ಧೆಗೆ ಆಶ್ರಯ ಕಲ್ಪಿಸಲಾಗಿದೆ. ಅವರಿಗೆ ಆರೋಗ್ಯ ಸಮಸ್ಯೆ ಇಲ್ಲ, ಆರಾಮಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net