ಅತ್ಯುತ್ತಮ ತಂಡದೊಂದಿಗೆ ಕೆಲಸ ನಿರ್ವಹಣೆ: ನಿರ್ಗಮಿತ ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಭಿಮತ

1 (1)
Published on

ಮಂಡ್ಯ: ಜಿಲ್ಲೆಯಲ್ಲಿ ಎಂಟು ತಿಂಗಳ ಕೆಲಸ ನಿರ್ವಹಿಸಿದ್ದೇನೆ. ಉತ್ತಮವಾದ ಆಡಳಿತ ನೀಡಲು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ತೊಂದರೆ ಇಲ್ಲದೆ ನಿರ್ವಹಿಸಲು ಅಧಿಕಾರಿ ಹಾಗೂ ಸಿಬ್ಬಂದಿ ಕಾರಣ. ಒಟ್ಟಾರೆ ಉತ್ತಮ ತಂಡದ ಜತೆಗೆ ಕೆಲಸ ನಿರ್ವಹಿಸಿದ ಹೆಮ್ಮೆ ನನಗೆ ಇದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬಿಳ್ಕೋಡುಗೆ ಹಾಗೂ ನೂತನ ಡಿಸಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲ ಸಂದರ್ಭದಲ್ಲೂ ಸಂಪೂರ್ಣ ಸಹಕಾರ ನೀಡಿದ್ದೀರಿ. ಅದರಿಂದಾಗಿ ಶೋಷಿತರು, ಮಹಿಳೆಯರು, ಬಡವರ ಅಭಿವೃದ್ಧಿಗಾಗಿ ಶ್ರಮಿಸಲು ಅವಕಾಶ ಮಾಡಿದ್ದೀರಿ. ಅದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

ತಾಲೂಕು ಹಾಗೂ ಕೆಳಮಟ್ಟದ ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಯನ್ನು ಕೆಳಮಟ್ಟದಲ್ಲೇ ಪರಿಹರಿಸಬೇಕು. ಇದರಿಂದ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗೆ ಸಾರ್ವಜನಿಕರು ಅಲೆಯುವುದು ತಪ್ಪುತ್ತದೆ. ಯಾವುದೇ ಅಡೆತಡೆ ಇಲ್ಲದೇ ಕೆಲಸ ನಿರ್ವಹಿಸಿದ ಖುಷಿ ಇದೆ. ತಾಳ್ಮೆಯಿಂದ ವರ್ತಿಸಿದ ಜಿಲ್ಲೆಯ ಸಾರ್ವಜನಿಕರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲುಸುತ್ತೇನೆ. ನನಗೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಬೆನ್ನೆಲುಬಾಗಿ ನಿಂತಿದ್ದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ನೂತನ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸ್ವಾಗತ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಂಡ್ಯ ಪ್ರಭಾರ ಎಸಿ ಎಂ.ಪಿ.ಕೃಷ್ಣಕುಮಾರ್, ಪಾಂಡವಪುರ ಎಸಿ ನಂದೀಶ್, ಜಿಲ್ಲಾ ಅರಣ್ಯಾಧಿಕಾರಿ ರುಥ್ರೇನ್, ಜಿ.ಪಂ ಉಪ ಕಾರ್ಯದರ್ಶಿ ಸಂಜಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net