ರಹಮತ್ ನಗರದಲ್ಲಿ ಡಿಸಿ ಸತ್ಯಭಾಮ ಪ್ರದಕ್ಷಿಣೆ ; ಒತ್ತುವರಿ ತೆರವಿಗೆ ಸಹಕರಿಸಿದಿದ್ದರೆ ಎಫ್‌ಐಆರ್

6-klr-3
Published on

ಕೋಲಾರ : ನಗರದ ರಹಮತ್ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಭಕ್ಕೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಡಿಸಿ ಸಿ. ಸತ್ಯಭಾಮ, ಫುಟ್‌ಪಾತ್ ಒತ್ತುವರಿ ವಾರದೊಳಗೆ ತೆರವುಗೊಳಿಸಿ, ಸಹಕರಿಸದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಶ್ರೀನಿವಾಸಪುರ ವೃತ್ತದಿಂದ ಆರಂಭಿಸಿ ರಹಮತ್‌ನಗರದವರೆಗೆ ಶನಿವಾರ ಬೆಳಗ್ಗೆ ಪ್ರದಕ್ಷಿಣೆ ಕೈಗೊಂಡು ರಸ್ತೆ ಕಾಮಗಾರಿ ಕುಂಟುತ್ತಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರಲ್ಲದೆ, ರಸ್ತೆ ಅಗಲೀಕರಣ, ಚರಂಡಿಯ ಅಳತೆಯಲ್ಲಿ ಒತ್ತಡಕ್ಕೆ ಮಣಿದು ತಾರತಮ್ಯ ಎಸಗದಂತೆ ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಪಿಡಬ್ಲ್ಯುಡಿ ಎಇಇ ಮುಸ್ತಾಕ್ ಆಹ್ಮಮದ್‌ಗೆ ಸೂಚಿಸಿದರು.

ರಸ್ತೆ ಬದಿಯಲ್ಲಿ ಬಾಗಿರುವ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳನ್ನು ಹಿಂಬದಿಗೆ ಹಾಕಿಸಲು ಬೆಸ್ಕಾಂಗೆ ಸೂಚಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿಗೆ ನಿರ್ದೇಶಿಸಿದರು. ಪೆಟ್ರೋಲ್ ಬಂಕ್ ಮಾಲಿಕರು ಪಾದಚಾರಿ ರಸ್ತೆ ಅತಿಕ್ರಮಿಸಿದ್ದನ್ನು ಕಂಡು ನಗರದಲ್ಲಿನ ಎಲ್ಲ ಪೆಟ್ರೋಲ್ ಬಂಕ್‌ಗಳು ತಮ್ಮಜಾಗದಲ್ಲಿ ಮಾತ್ರ ವ್ಯವಹಾರ ನಡೆಸುವಂತೆ ಬಂಕ್ ಮಾಲಿಕರಿಗೆ ಹಾಗೂ ಅಯಿಲ್ ಕಾರ್ಪೋರೇಷನ್ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ವಹಿಸಿ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಮುಂಭಾಗದಲ್ಲಿನ ನಂದಿನಿಪಾರ್ಲರ್, ಅರಹಳ್ಳಿ ಗೇಟ್ ಬಳಿ ಅಂಗಡಿ ಮಾಲಿಕರು ಮಾಡಿರುವ ಚರಂಡಿ, ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ, ರಸ್ತೆಬದಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವವರಿಗೆ ದುಪ್ಪಟ್ಟು ದಂಡ ವಸೂಲಿ ಮಾಡುವಂತೆ ಸಂಚಾರಿ ಪೋಲಿಸರಿಗೆ ಸೂಚಿಸಿದರು.

ಶ್ರೀನಿವಾಸಪುರ ವೃತ್ತದಲ್ಲಿ ಪೊಲೀಸ್ ಚೌಕಿ ನಿರ್ಮಿಸಿ, ಸುತ್ತಲಿನ ಅಕ್ರಮ ಪೆಟ್ಟಿಗೆ ಅಂಗಡಿ ತೆರವು ಮಾಡಿಸಿ ಅವರಿಗೆ ಸೂಕ್ತ ಸ್ಥಳ ಗುರುತಿಸಿಕೊಡಿ, ಪ್ರಯಾಣಿಕರ ತಂಗುದಾಣದ ಸ್ವಚ್ಛತೆ, ಸಾರ್ವಜನಿಕ ಶೌಚಗೃಹದ ನಿರ್ವಹಣೆಗೆ ಕ್ರಮ ವಹಿಸುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು. ಟ್ರಕ್ ಟರ್ಮಿನಲ್ ನಗರಸಭೆಯ ಜಾಗವಾಗಿರುವುದರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿ, ಪಕ್ಕದಲ್ಲಿನ ಕ್ರೈಸ್ತರ ಸ್ಮಶಾನಕ್ಕೆ ಜಾಗ ರಸ್ತೆ ಒತ್ತುವರಿಯಿಂದ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಸಮಾಧಿಗಳನ್ನು ಹಿಂದಕ್ಕೆ ಹಾಕಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಅಮೃತ್ ಸಿಟಿ ಯೋಜನೆಯ ಅಧಿಕಾರಿಗಳಾದ ನಾರಾಯಣಸ್ವಾಮಿ, ಶ್ರೀನಾಥ್, ಇಂಜಿನಿಯರ್ ರಾಮಮೂರ್ತಿ, ಪರಿಸರ ಅಧಿಕಾರಿ ಪುನೀತ್, ನಗರಸಭೆ ಕಂದಾಯ ಅಧಿಕಾರಿ ಚಂದ್ರು, ನಿರೀಕ್ಷಕರಾದ ತ್ಯಾಗರಾಜ್, ನಾರಾಯಣಸ್ವಾಮಿ, ಗಲ್‌ಪೇಟೆ ಎಎಸ್‌ಐ ಮುಹೂಬೂಬ್ ಪಾಷಾ ಇತರರಿದ್ದರು.

ನನಗೆ ಫೋನ್ ಮಾಡಿ: ರಸ್ತೆಯ ಪಕ್ಕದಲೇ ಕಸದ ರಾಶಿ ಕಂಡ ಜಿಲ್ಲಾಧಿಕಾರಿಗಳು ನಾವೇನು ಕೆಲಸವಿಲ್ಲದೆ ರಸ್ತೆ, ಚರಂಡಿ ಅಭಿವೃದ್ಧಿಪಡಿಸುತ್ತಿಲ್ಲ. ಅಧಿಕಾರಿಗಳು ಮನೆಮನೆಗೆ ಬಂದು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಆಗಲ್ಲ. ಪ್ರತಿಯೊಬ್ಬರೂ ಮನೆಯಲ್ಲೇ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ನಗರಸಭೆಯ ಗಾಡಿ ಬರುವಾಗ ನೀಡಿ, ವಾಹನ ಬರದಿದ್ದರೆ ನನಗೆ ಫೋನ್ ಮಾಡಿ ಎಂದು ಸಾರ್ವಜನಿಕರಿಗೆ ಡಿಸಿ ತಿಳಿಸಿದರು.

ವಾರದ ಗಡುವು: ನಾನು ಸೂಚಿಸಿದ ಎಲ್ಲ ಕೆಲಸ ಕಾರ್ಯಗಳು ವಾರದೊಳಗೆ ಪೂರ್ಣಗೊಂಡಿರಬೇಕು. ಮತ್ತೆ ಸ್ಥಳ ಪರಿಶೀಲಿಸುವೆ, ಇದೆಲ್ಲಾ ನೀವು ಮಾಡಬೇಕಾಗದ ಕೆಲಸ. ನೀವು ಸರಿಯಾಗಿದ್ದರೆ ನಾನು ಇಷ್ಟೊಂದು ಶ್ರಮ ಪಡಬೇಕಾಗಿರಲಿಲ್ಲ ಎಂದು ನಗರಸಭೆ, ಪಿಡಬ್ಲ್ಯುಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net