ಆನೇಕಲ್ ತಾಲೂಕಿನಲ್ಲಿ ಡಿಸಿ ರೌಂಡ್ಸ್

anekal
Published on

ಆನೇಕಲ್: ತಾಲೂಕಿನ ವಿವಿಧ ಸ್ಥಳಗಳಿಗೆ ಗುರುವಾರ ಜಿಲ್ಲಾಧಿಕಾರಿ ಜಗದೀಶ್ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳು ಮತ್ತು ಆಡಳಿತದ ಬಗ್ಗೆ ಪರಿಶೀಲಿಸಿದರು.

ಅತ್ತಿಬೆಲೆ ಪುರಸಭೆ, ಆನೇಕಲ್ ಸರ್ಕಾರಿ ಆಸ್ಪತ್ರೆ, ಜಿಗಣಿ ಪುರಸಭೆ ಮತ್ತು ತಾಲೂಕು ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಸರ್ಕಾರಿ ಭೂಮಿ ಒತ್ತುವರಿ ತೆರವು, ಅಕ್ರಮ ಬಡಾವಣೆಗಳಿಗೆ ಕಡಿವಾಣ, ಪುರಸಭೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಸೇರಿ ವಿವಿಧ ಕೆಲಸಗಳನ್ನು ತ್ವರಿತವಾಗಿ ಕ್ರಮ ವಹಿಸಲಾಗುವುದು. 15 ದಿನಗಳಿಗೊಮ್ಮೆ ಆನೇಕಲ್ ತಾಲೂಕಿಗೆ ಭೇಟಿ ನೀಡಿ ಅಹವಾಲು ಆಲಿಸಲಾಗುವುದು ಎಂದು ಜಗದೀಶ್ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಮಾಡುವಾಗ ನಾಲ್ಕು ಅಡಿಗಳಿಗಿಂತ ಎತ್ತರ ಮಾಡಬೇಡಿ. ಇದರಿಂದ ಮುಖ್ಯ ರಸ್ತೆಯಲ್ಲಿ ಸಮಸ್ಯೆಯಾಗುತ್ತದೆ. ವೈಜ್ಞಾನಿಕವಾಗಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಎರಡು ಮಳೆ ಬಂದರೆ ರಸ್ತೆ ಕಿತ್ತು ಹೋಗುತ್ತದೆ. ಸಾರ್ವಜನಿಕರ ಹಣ ಪೋಲಾಗುತ್ತದೆ. ರಸ್ತೆ ಹಾಳಾದಲ್ಲಿ ಸಂಬಂಧಿಸಿದ ಗುತ್ತಿಗೆದಾರರನ್ನು ಹೊಣೆ ಮಾಡಲಾಗುವುದು. ಪದೇಪದೆ ರಸ್ತೆ ನಿರ್ಮಿಸಿದರೂ ಹಾಳಾಗುತ್ತಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳು ಶಿಫಾರಸು ಮಾಡಬೇಕು ಎಂದರು.

ಪೋಡಿಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಕಂದಾಯ ಸಚಿವರು ವಿವಿಧ ನಿರ್ದೇಶನ ನೀಡಿದ್ದಾರೆ. ರೈತರಿಗೆ ಸರ್ಕಾರದ ಜಮೀನು ಮಂಜೂರಾಗಿ ದಶಕಗಳೇ ಕಳೆದಿದ್ದರೂ ಜಮೀನುಗಳ ಪೋಡಿ ಆಗದೇ ಉಳಿದಿರುವುದರಿಂದ ರೈತರು ಜಮೀನಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪೋಡಿ ದುರಸ್ತಿ ಮಾಡಿ ಪ್ರತಿಯೊಬ್ಬ ರೈತರಿಗೂ ಪ್ರತ್ಯೇಕ ಸರ್ವೆ ನಂ. ಮತ್ತು ಪಹಣಿಯಲ್ಲಿ ಮಾಹಿತಿ ದಾಖಲಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಇದನ್ನು ಆಂದೋಲನದ ರೀತಿಯಲ್ಲಿ ಕೈಗೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಆನೇಕಲ್ ಮತ್ತು ಬೆಂಗಳೂರು ಪೂರ್ವ ತಾಲೂಕಿನಲ್ಲಿ ಈಗಾಗಲೇ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದರು.

ಗಮನಸೆಳೆದಿದ್ದ ವಿಜಯವಾಣಿ

ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆಯಲ್ಲಿ ಆನೇಕಲ್ ತಾಲೂಕು ಕಚೇರಿ ಸಂಪೂರ್ಣ ಸ್ವಚ್ಛವಾಗಿತ್ತು. ‘ತಾಲೂಕು ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ’ ಶೀರ್ಷಿಕೆಯಡಿ ‘ವಿಜಯವಾಣಿ’ ಇತ್ತೀಚೆಗೆ ಸಮಗ್ರ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದರು.

ಶೀಘ್ರದಲ್ಲೇ ಖುದ್ದು ಪರಿಶೀಲನೆ

ಸಮಯ ರಾತ್ರಿ 7.30 ಆದ ಕಾರಣ ಜಿಗಣಿ ಭೇಟಿ ಬಳಿಕ ಬೊಮ್ಮಸಂದ್ರ ಚಂದಾಪುರ ಹೆಬ್ಬಗೋಡಿಗೆ ಭೇಟಿ ನೀಡಲು ಸಾಧ್ಯವಾಗದೆ ಮುಂದಿನ ದಿನಗಳಲ್ಲಿ ಕಚೇರಿ ಹಾಗೂ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ಮಾಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ತಹಸೀಲ್ದಾರ್ ಶಶಿಧರ್ ಮಾಡ್ಯಾಳ್, ಯೋಜನಾಧಿಕಾರಿ ಡಾ.ಮಾಧವಿ, ವಿಶೇಷ ತಹಸೀಲ್ದಾರ್ ಕರಿಯ ನಾಯಕ್, ಭೂದಾಖಲೆ ಇಲಾಖೆಯ ಸಹಾಯಕ ನಿರ್ದೇಶಕ ಮದನ್, ಜಿಗಣಿ ಪುರಸಭಾ ಮುಖ್ಯಾಧಿಕಾರಿ ರಾಜೇಶ್, ಅತ್ತಿಬೆಲೆ ಮಂಜುನಾಥ್, ಪುರಸಭಾ ಸದಸ್ಯ ಆರ್.ಗಣಿ ಪುನೀತ್, ಆರ್‌ಒ ಜಿಗಣಿ ಮುನಿರಾಜು, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net