ಜನರ ಸಮಸ್ಯೆಗೆ ಶೀಘ್ರ ಪರಿಹಾರ, ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ 54 ಅಹವಾಲು ಸಲ್ಲಿಕೆ

IMG-20240612-WA0017.jpg
Published on

ಹುಬ್ಬಳ್ಳಿ: ರಸ್ತೆ, ಮನೆ ನಿರ್ಮಾಣ, ಮೂಲ ಸೌಲಭ್ಯ ಸೇರಿ ಸಾರ್ವಜನಿಕರ ವಿವಿಧ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಂದ 54 ಅಹವಾಲುಗಳು ಬಂದಿವೆ. ಅದರಲ್ಲಿ 37 ಅರ್ಜಿಗಳು ಹುಬ್ಬಳ್ಳಿ ನಗರ, 12 ಅರ್ಜಿಗಳು ಗ್ರಾಮಿಣ ಭಾಗಕ್ಕೆ ಸಂಬಂಧಿಸಿದ್ದು, ಉಳಿದ 5 ಅರ್ಜಿಗಳು ಇತರೆ ತಾಲೂಕುಗಳಿಂದ ಬಂದಿವೆ.

ಸುಮಾರು 20 ಅರ್ಜಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದ ರಸ್ತೆ ದುರಸ್ತಿ, ಮನೆ ನಿರ್ಮಾಣ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ಕೇಳಿರುವ ಅರ್ಜಿಗಳಾಗಿವೆ.

ಈ ಕುರಿತು ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಪರಿಹರಿಸುವಂತೆ ಸೂಚಿಸಲಾಗುವುದು. ಇವುಗಳ ಜೊತೆಗೆ ಪಿಂಚಣಿ ಮತ್ತು ಆಧಾರಗೆ ಸಂಬಂಧಿಸಿದ ಅರ್ಜಿಗಳನ್ನು ಜಿಲ್ಲಾಡಳಿತ ಪರಿಹರಿಸಲಿದೆ ಎಂದು ತಿಳಿಸಿದರು.

ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಸ್ಥಳ ವೀಕ್ಷಣೆ ಬಳಿಕ ಪರಿಹಾರ ನೀಡಲಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಹ ಕೆಲವು ಅರ್ಜಿಗಳು ವಿಲೇವಾರಿಯಾಗದೇ ಉಳಿದುಕೊಳ್ಳುತ್ತವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಹುಬ್ಬಳ್ಳಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net