

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಕಾಳೇನಹಳ್ಳಿ ಕ್ಷೇತ್ರದ ನಿರ್ದೆಶಕ ಡಿ.ಸಿ.ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುರುವಂಕ ಕ್ಷೇತ್ರದ ದೇವರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರ ಚುನಾವಣೆ ನಿಗದಿಗೊಳಿಸಿತ್ತು. ಈ ಸ್ಥಾನಕ್ಕೆ ಡಿ.ಸಿ.ರಂಗಸ್ವಾಮಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಡಿ.ಲೀಲಾ ಅವರು ಡಿ.ಸಿ.ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ನೂತನ ಅಧ್ಯಕ್ಷ ಡಿ.ಸಿ.ರಂಗಸ್ವಾಮಿ ಮಾತನಾಡಿ, ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನೆಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆ ಪಡೆದು ಸಂಘ ಮುನ್ನಡೆಸುತ್ತೇನೆ. ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ಅವರ ಅರ್ಥಿಕತೆ ಬಲಗೊಳಿಸಲಾಗುವುದು ಎಂದರು.
ಕಸಬಾ ಸೊಸೈಟಿಯಲ್ಲಿ 7.98 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. ಹೈನುಗಾರಿಕೆಗೆ 6.70 ಲಕ್ಷ ರೂ. ಮಧ್ಯಮಾವಧಿ ಸಾಲವಾಗಿ 1.21 ಕೋಟಿ ರೂ. ನೀಡಲಾಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ 1101 ರೈತರಿಗೆ 4.30ಕೋಟಿ ರೂ. ಸಾಲ ಮನ್ನಾ ಪ್ರಯೋಜನ ಲಭಿಸಿದೆ ಎಂದರು.
ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ್, ಬಾಳೆಮಂಡಿ, ಕೆ.ಎಸ್. ಮಂಜಪ್ಪ, ಕೆ.ಎನ್. ಬೋರೆಗೌಡ, ಎಂ.ವಿ. ನಂಜುಂಡಸ್ವಾಮಿ, ಬಿ.ಕೆ. ಲತಾ, ಜಿ.ಕೆ. ಮಧು ಇತರರು ಇದ್ದರು.