ಸಾಗುವಳಿ ಚೀಟಿ ಸಮಸ್ಯೆಗೆ ಶೀಘ್ರ ಪರಿಹಾರ : ಜಿಲ್ಲಾಧಿಕಾರಿ ರಾಕೇಶ್‌ಕುಮಾರ್

2 harohalli 2
Published on

ಹಾರೋಹಳ್ಳಿ : ಕಳೆದ 60 ವರ್ಷಗಳಿಂದ ಕೃಷಿಯಲ್ಲಿ ತೊಡಗಿರುವ ಗುಲ್ಲಟ್ಟಿಕಾವಲ್ ಜನರಿಗೆ ಸಾಗುವಳಿ ಚೀಟಿ ನೀಡಲು ವಿಳಂಬವಾಗಿರುವ ಹಿನ್ನೆಲೆ ಖುದ್ದು ಪರಿಶೀಲನೆ ನಡೆಸಿದ್ದು, ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್ ತಿಳಿಸಿದರು.

ಹೋಬಳಿಯ ಗುಲ್ಲಟ್ಟಿ ಕಾವಲ್ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ಅವರು, ಕಳೆದ ವಾರ ನಡೆದ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಸಂಸದ ಡಿ. ಕೆ. ಸುರೇಶ್ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗೋವಿಂದಯ್ಯ ಅವರು ಈ ಕುರಿತು ಮನವಿ ಮಾಡಿದ್ದರು. ಅದರಂತೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.

ಗ್ರಾಮದಲ್ಲಿ ದಲಿತರೇ ಹೆಚ್ಚಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಬದ್ಧವಾಗಿದೆ. 1960ರಿಂದ ಈ ಗ್ರಾಮದ 800 ಎಕರೆ ಜಮೀನಿನಲ್ಲಿ ಗುಲ್ಲಟ್ಟಿಕಾವಲ್ ಜನ ಸಾಗುವಳಿ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳು 600 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂದು ಪ್ರಸ್ತಾವನೆ ಕಳಿಸಿದ್ದಾರೆ. ಇಲ್ಲಿನ ವಾಸ್ತವಾಂಶವನ್ನು ಮರು ಪರಿಶೀಲಿಸಿ 800 ಎಕರೆ ಸಾಗುವಳಿ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯವರ ಕಿರಿಕಿರಿ, ಸಾಗುವಳಿ ಚೀಟಿ, ದಾರಿ ಸಮಸ್ಯೆ ಹಾಗೂ ಆನೆಗಳ ಕಾಟ ಇತರ ತೊಂದರೆಗಳ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಇವುಗಳಿಗೆ ಶಾಶ್ವತ ಪರಿಹಾರವನ್ನು ನೀಡಲಾಗುವುದು ಹಾಗೂ ತಾಲೂಕಿನ ಇತರೆಡೆ ಸಾಗುವಳಿ ಚೀಟಿ ನೀಡಲು ಇರುವ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ಕಳೆದ 70 ವರ್ಷಗಳಿಂದ ಈ ಭಾಗದಲ್ಲಿ ಕೃಷಿ ಮಾಡುತ್ತಿದ್ದು, ಸರ್ಕಾರ ಸಾಗುವಳಿ ಚೀಟಿ ನೀಡದೇ ಸತಾಯಿಸುತ್ತಿದೆ. ಈ ಕುರಿತು ನಾವು ಜಿಲ್ಲಾಧಿಕಾರಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಖುದ್ದು ಆಗಮಿಸಿ ನ್ಯಾಯ ದೊರಕಿಸಿ ಕೊಡಲು ಕಳೆದ ವಾರ ಜಿಲ್ಲಾ ಜಾಗೃತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು, ನಮಗೆ ಸಾಗುವಳಿ ಚೀಟಿ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಜಿಪಂ ಸಿಇಒ ಇಕ್ರಂ, ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಮಧು, ಆರ್‌ಎಫ್‌ಒ ರಾಜಕುಮಾರ್, ಕೆಎಸ್‌ಎಸ್‌ಡಿ ಜಿಲ್ಲಾಧ್ಯಕ್ಷ ಕೋಟೆಕುಮಾರ್, ಗ್ರಾಪಂ ಪಿಡಿಒ ಸಿದ್ದಮುಗಿಲೇಗೌಡ, ತಾಪಂ ಮಾಜಿ ಸದಸ್ಯ ಸೋಮಸುಂದರ್ ಮುಖಂಡರಾದ ರುದ್ರೇಶ್, ಕೋಟೆಪ್ರಕಾಶ್, ಸತೀಶ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net