10 ಸಾವಿರ ಮಾಸ್ಕ್ ತಯಾರಿ : ಸ್ತ್ರೀಶಕ್ತಿ ಸಂಘಗಳ ಶ್ರಮಕ್ಕೆ ಡಿಸಿ ಮೆಚ್ಚುಗೆ

mask
Published on

ತುಮಕೂರು: ಕರೊನಾ ಸೋಂಕು ಹರಡದಂತೆ ತಡೆಯಲು ಪ್ರಮುಖ ಅಸ್ತ್ರ 'ಮಾಸ್ಕ್'. ಜಿಲ್ಲೆಯೆಲ್ಲೆಡೆ ಮಾಸ್ಕ್, ಸ್ಯಾನಿಟೈಸರ್‌ಗೆ ಇನ್ನಿಲ್ಲದ ಬೇಡಿಕೆ ಉಂಟಾಗಿ ಅಭಾವ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ತ್ರೀಶಕ್ತಿ ಸಂಘಗಳು ಹಗಲುರಾತ್ರಿ ಎನ್ನದೆ ಮಾಸ್ಕ್‌ಗಳನ್ನು ತಯಾರಿಸಲು ಟೊಂಕಕಟ್ಟಿ ನಿಂತಿದ್ದು ಈವರೆಗೆ 10 ಸಾವಿರಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಪೂರೈಸಿವೆ.

ತಿಪಟೂರು, ಚಿಕ್ಕನಾಯಕನಹಳ್ಳಿ ಮಹಿಳಾ ಸ್ವ-ಸಹಕಾರ ಸಂಘಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಸಂಜೀವಿನಿ ಯೋಜನೆಯಡಿ ರಚಿಸಿರುವ ಗ್ರಾಮ ಪಂಚಾಯತ್ ಒಕ್ಕೂಟಗಳ ಈ ಮಹಿಳಾ ಸ್ವಸಹಾಯ ಗುಂಪುಗಳ 60ಕ್ಕೂ ಹೆಚ್ಚು ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು ಮಾಸ್ಕ್‌ಗಳ ಕೊರತೆ ನೀಗಿಸಿದ್ದಾರೆ.

ಬ್ಯೂಟಿ ಪಾರ್ಲರ್, ಕೈಮಗ್ಗ, ಸಿರಿಧಾನ್ಯಗಳ ಮಾಲ್ಟ್, ಹಪ್ಪಳ, ಉಪ್ಪಿನಕಾಯಿ, ಸಂಡಿಕೆ ಮತ್ತಿತರ ಗುಡಿ ಕೈಗಾರಿಗಳಿಗಷ್ಟೇ ಸೀಮಿತವಾಗಿದ್ದ ಸ್ವ-ಸಹಾಯ ಗುಂಪುಗಳು ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಕೈಕಟ್ಟಿ ಕುಳಿತುಕೊಳ್ಳದೆ ಮಾಸ್ಕ್‌ಗಳ ತಯಾರಿಕೆಗೂ ಮುಂದಾಗಿವೆ.

ಚಿಕ್ಕನಾಯಕನಹಳ್ಳಿ ತಾಲೂಕು ದೊಡ್ಡಬಿದರೆ ಗ್ರಾಮದ ಜ್ಞಾನಜ್ಯೋತಿ ಸಂಜೀವಿನಿ, ಜೆ.ಸಿ.ಪುರದ ಶ್ರೀ ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟ, ಕೆಂಕೆರೆಯ ಓಂಕಾರ ಸಂಜೀವಿನಿ ಒಕ್ಕೂಟ, ಮುದ್ದೇನಹಳ್ಳಿಯ ಜೀವನ್ಮುಖಿ ಸಂಜೀವಿನಿ ಒಕ್ಕೂಟ, ಚೌಳಕಟ್ಟೆಯ ಸಮೃದ್ಧಿ ಸಂಜೀವಿನಿ ಒಕ್ಕೂಟ, ಹಂದನಕೆರೆಯ ಸಾಧನ ಸಂಜೀವಿನಿ ಒಕ್ಕೂಟ ಹಾಗೂ ತಿಪಟೂರು ತಾಲೂಕು ಬಿಳಿಗೆರೆಯ ಸ್ಪಂದನ ಸಂಜೀವಿನಿ ಒಕ್ಕೂಟ, ಈಚನೂರು ಅಮೃತಬಿಂದು ಸಂಜೀವಿನಿ ಒಕ್ಕೂಟ, ಕರಡಿ ಗ್ರಾಮದ ಚೇತನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

ಜಿಲ್ಲಾಧಿಕಾರಿಗೆ ಹಸ್ತಾಂತರ: ಕರೊನಾ ಸೇನಾನಿಗಳಿಗೆ ವಿತರಿಸಲು ಜಿಲ್ಲಾಡಳಿತ ಹಾಗೂ ಜಿಪಂ ಆದೇಶದಂತೆ 10 ಸಾವಿರ ಮಾಸ್ಕ್‌ಗಳನ್ನು ಸ್ವ-ಸಹಾಯ ಸಂಘಗಳು ತಯಾರಿಸಿದ್ದು, ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಆರೋಗ್ಯಕ್ಕೆ ಹಾನಿಕಾರಕವಲ್ಲದ ಕಾಟನ್ (ಹತ್ತಿ) ಬಟ್ಟೆಯಿಂದ ಕೂಡಿರುವ ಮಾಸ್ಕ್‌ಗಳನ್ನು ತಯಾರಿಸುವ ಕುರಿತು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ಮಾಸ್ಕ್‌ಗಳನ್ನು ತಯಾರಿಸಲು ಸಲಹೆ ನೀಡಿದ್ದಾರೆ.

ಕರೊನಾ ಸೇನಾನಿಗಳಿಗೆ ವಿತರಣೆ: ಮೊದಲ ಹಂತದಲ್ಲಿ ಹಳ್ಳಿಹಳ್ಳಿಗೂ ತೆರಳಿ ಕರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತರಿಗೆ 6800, ರಸ್ತೆಗಳಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ 1000, ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸಿಬ್ಬಂದಿಗೆ 1000, ಜಿಪಂ ಅಧಿಕಾರಿ/ ಸಿಬ್ಬಂದಿಗೆ 500 ಹಾಗೂ ಮತ್ತಿತರೆ ಇಲಾಖೆಗಳಿಗೆ 700 ಮಾಸ್ಕ್‌ಗಳನ್ನು ವಿತರಿಸಲಾಗಿದೆ.

ಮಾಸ್ಕ್, ಸ್ಯಾನಿಟೈಸರ್ ನಗರಕ್ಕೆ ಸೀಮಿತವಾಗಿದ್ದವು. ಕರೊನಾ ತಡೆಗಟ್ಟಲು ಹಳ್ಳಿಜನಕ್ಕೂ ಹಾಗೂ ಕರೊನಾ ಸೇನಾನಿಗಳು ಮಾಸ್ಕ್ ತಯಾರಿಸಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದ್ದು ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ನಮ್ಮ ನೆರವಿಗೆ ಬಂದಿದೆ. ಗಾಯತ್ರಿ ಓಂಕಾರ ಸಂಜೀವಿನಿ ಒಕ್ಕೂಟ, ಕೆಂಕೆರೆ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವುದು ಜತೆಗೆ ಕರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕರೊನಾ ಸೇನಾನಿಗಳ ಬಳಕೆಗೆ ಮಾಸ್ಕ್ ತಯಾರಿಸಲು ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾಸ್ಕ್‌ಗಳನ್ನು ತಯಾರಿಸಲು ಸೂಚಿಸಲಾಗುವುದು. ಶುಭಾಕಲ್ಯಾಣ್ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net