ಖಾಸಗಿಯವರಿಗೆ ಶಿಫಾರಸು ಮಾಡಿದ್ರೆ ಕ್ರಮ: ಆಸ್ಪತ್ರೆಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಂ.ಎನ್.ನಾಗರಾಜು ಎಚ್ಚರಿಕೆ

23CBP2
Published on

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಖಾಸಗಿ ಪ್ರಯೋಗಾಲಯ ಮತ್ತು ಔಷಧ ಅಂಗಡಿಗಳಿಗೆ ಶಿಫಾರಸು ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎನ್.ನಾಗರಾಜು ಎಚ್ಚರಿಕೆ ನೀಡಿದರು. ಸರ್ಕಾರಿ ರಜೆಯ ದಿನವಾದ ತಿಂಗಳ ನಾಲ್ಕನೆಯ ಶನಿವಾರದ ಕಾರ್ಯನಿರ್ವಹಣೆ ವೈಖರಿಯನ್ನು ತಿಳಿಯಲು ನಗರದ ಜಿಲ್ಲಾಸ್ಪತ್ರೆ ಮತ್ತು ಜೈಭೀಮ್ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಯಾವುದೇ ಕಾರಣಕ್ಕೂ ವೈದ್ಯರು ಔಷಧಗಳ ಚೀಟಿಗಳನ್ನು ಆಸ್ಪತ್ರೆಯ ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಖರೀದಿಸಲು ಚೀಟಿ ಬರೆದುಕೊಡುವ, ಆರೋಗ್ಯ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಶಿಫಾರಸು ಮಾಡುವುದರ ಬಗ್ಗೆ ದೂರುಗಳು ಬರುತ್ತಿವೆ. ಇದು ನಿಲ್ಲಬೇಕು ಎಂದು ಸೂಚಿಸಿದರು.


ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿಲ್ಲಾಸ್ಪತ್ರೆಗೆ ಬಡ ಜನರು ಬರುತ್ತಾರೆ. ಇದಕ್ಕೆ ಅನವಶ್ಯಕವಾಗಿ ಅಲೆದಾಡಿಸುವುದು ಸರಿಯಲ್ಲ. ಜನರ ಆರೋಗ್ಯ ಸೇವೆಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಬಾರದು ಎಂದರು.
ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪರಸ್ಪರ ಪೂರಕ ಸಂಬಂಧವಿದೆ. ಆಸ್ಪತ್ರೆಯಲ್ಲಿ ಎಲೆ ಅಡಿಕೆ ಮತ್ತು ತಂಬಾಕು ಉತ್ಪನ್ನಗಳನ್ನು ಜಗಿದು ಎಲ್ಲೆಂದರಲ್ಲಿ ಉಗಿಯುವುದಕ್ಕೆ ಅವಕಾಶ ನೀಡಬಾರದು. ಉಪಯೋಗಿಸಿದ ಬಟ್ಟೆ, ವಸ್ತು ಮತ್ತು ಇತರ ಉಪಕರಣಗಳನ್ನು ಸಿಕ್ಕಸಿಕ್ಕಲ್ಲಿ ಬಿಸಾಡಿದರೆ ಆಸ್ಪತ್ರೆಯು ಕಸದ ತೊಟ್ಟಿಯಂತಾಗುತ್ತದೆ. ಇದರ ಅರಿವು ಎಲ್ಲರಲ್ಲೂ ಇರಬೇಕು. ಸ್ವಂತ ಮನೆಯ ಮಾದರಿಯಲ್ಲಿ ಆರೋಗ್ಯ ದೇಗುಲವನ್ನು ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ರಾಜಾರೆಡ್ಡಿ, ನಿಲಯ ಕ್ಷೇಮಪಾಲಕ ಲಕ್ಷ್ಮಣ್ ರೆಡ್ಡಿ ಮತ್ತಿತರರು ಇದ್ದರು.

ಆಹಾರ ಗುಣಮಟ್ಟ ಪರಿಶೀಲನೆ: ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕ, ತಂಬಾಕು ವ್ಯಸನ ಮುಕ್ತ ಕೇಂದ್ರ, ಚರ್ಮರೋಗ, ತೀವ್ರ ನಿಗಾ ಘಟಕ, ಹೆರಿಗೆ ವಿಭಾಗ ಮತ್ತು ಆಮ್ಲಜನಕ ಉತ್ಪಾದನಾ ಘಟಕಗಳು ಮತ್ತು ನೆಲಮಹಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೋಗಿಗಳಿಂದ ಕುಂದು-ಕೊರತೆಗಳನ್ನು ಆಲಿಸಿದರು. ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಗುಣಮಟ್ಟ ಪರಿಶೀಲಿಸಿದರು.

ವಾರ್ಡನ್‌ಗೆ ಡಿಸಿ ತರಾಟೆ: ಹಿಂದುಳಿದ ವರ್ಗದ ವಸತಿ ನಿಲಯದಲ್ಲಿ ಕಳಪೆ ಊಟ ಬಡಿಸುತ್ತಿದ್ದನ್ನು ನೋಡಿ ವಾರ್ಡನ್‌ಗೆ ತರಾಟೆಗೆ ತೆಗೆದುಕೊಳ್ಳಲಾಯಿತು. ಜತೆಗೆ ಊಟವನ್ನು ಸೇವಿಸಲು ಸೂಚಿಸಲಾಯಿತು. ರುಚಿಯನ್ನು ಸವಿದ ಬಳಿಕ, ಇಂತಹ ಊಟವನ್ನು ವಿದ್ಯಾರ್ಥಿಗಳು ತಿನ್ನುವುದಾದರೂ ಹೇಗೆ ಎಂದು ಪ್ರಶ್ನಿಸಿದ ಡಿಸಿ, ಆಹಾರದ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಆದಷ್ಟು ಬೇಗ ಸುಧಾರಣೆಯಾಗಬೇಕು. ಮತ್ತೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸುವುದಾಗಿ ತಿಳಿಸಿದರು. ವಿದ್ಯಾರ್ಥಿ ನಿಲಯಗಳಲ್ಲಿ ಕುಡಿಯಲು ಶುದ್ಧ ನೀರು, ಉತ್ತಮ ಪೌಷ್ಟಿಕ ಆಹಾರ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ನಿಯಮಾನುಸಾರ ಸಿಗದಿದ್ದಲ್ಲಿ ಪ್ರಶ್ನಿಸಲು ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net