ಎಂಪಿ ಮತ ಎಣಿಕೆಗೆ ಕ್ಷಣಗಣನೆ: 123 ಟೇಬಲ್‌ಗಳಲ್ಲಿ ನಡೆಯಲಿರುವ ಪ್ರಕ್ರಿಯೆ

DC press conference regarding Lok Sabha elections vote counting Mandya
Published on

ಮಂಡ್ಯ: ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಜೂ.4ರಂದು ನಗರದ ಮಂಡ್ಯ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಮತ ಎಣಿಕೆಯ ವೀಕ್ಷಕರನ್ನಾಗಿ ಹಿರಿಯ ಐಎಎಸ್ ಅಧಿಕಾರಿ ನೀರಜ್‌ಕುಮಾರ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್ಗಳಂತೆ ಒಟ್ಟು 123 ಟೇಬಲ್‌ಗಳಲ್ಲಿ ಒಟ್ಟು 151 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ. ಮಳವಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 20 ಸುತ್ತು, ಮದ್ದೂರು 19 ಸುತ್ತು, ಮೇಲುಕೋಟೆ 19 ಸುತ್ತು, ಮಂಡ್ಯ 19 ಸುತ್ತು, ಶ್ರೀರಂಗಪಟ್ಟಣ 18 ಸುತ್ತು, ನಾಗಮಂಗಲ 19 ಸುತ್ತು, ಕೆ.ಆರ್.ಪೇಟೆ 19 ಸುತ್ತು, ಕೆ.ಆರ್.ನಗರ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 44 ಹಾಗೂ ಮೀಸಲು 48 ಸಿಬ್ಬಂದಿ ಸೇರಿದಂತೆ ಒಟ್ಟು 400 ಅಧಿಕಾರಿ/ ನೌಕರರನ್ನು ನೇಮಿಸಲಾಗಿದೆ. ಇವರಲ್ಲಿ 16 ಎಆರ್‌ಒ, 128 ಕೌಂಟಿಂಗ್ ಸೂಪರ್ ವೈಸರ್, 128 ಕೌಂಟಿಂಗ್ ಅಸಿಸ್ಟೆಂಟ್, 128 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಒಂದು ರೌಂಡ್‌ಗೆ 14 ಇವಿಎಂ ಯಂತ್ರಗಳ ಮತ ಎಣಿಕೆ ಮಾಡಲಾಗುವುದು. ಎರಡು ಕೊಠಡಿ ಅಂದರೆ ನೆಲಮಹಡಿಯ 102 ಮತ್ತು 107ರಲ್ಲಿ ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಮತ ಎಣಿಕೆ ಕಾರ್ಯವು 11 ಟೇಬಲ್‌ಗಳಲ್ಲಿ ನಡೆಯಲಿದೆ. ಅಂಚೆ ಮತಪತ್ರ ಮತ್ತು ಇಟಿಪಿಬಿಎಸ್ ಮತಪತ್ರಗಳ ಎಣಿಕೆ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎಲ್.ನಾಗರಾಜು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

4ರಂದು ಬೆಳಗ್ಗೆ 6.30ಕ್ಕೆ ಮೊದಲು ಅಂಚೆ ಮತಪತ್ರದ ಕೊಠಡಿಯನ್ನು ತೆರೆದು ಎಣಿಕೆ ಮಾಡಲಾಗುವುದು. ನಂತರ ಇತರೆ ಕೊಠಡಿಗಳನ್ನು ತೆರೆದು 8 ಗಂಟೆಯಿಂದ ಇವಿಎಂ ಮತಯಂತ್ರದ ಮತಗಳನ್ನು ಎಣಿಕೆ ಮಾಡಲಾಗುವುದು. ಪ್ರತಿ ಅಭ್ಯರ್ಥಿಯ ಪರವಾಗಿ ಎಣಿಕೆ ಏಜೆಂಟರಾಗಿ ಕಾರ್ಯನಿರ್ವಹಿಸುವಂತಹವರಿಗೆ ವಿವಿಧ ಬಣ್ಣ ಪಾಸ್‌ಗಳನ್ನು ನೀಡಲಾಗುವುದು. ಭದ್ರತಾ ಕೊಠಡಿಯಿಂದ ಎಣಿಕೆ ಟೇಬಲ್‌ಗೆ ಕಂಟ್ರೋಲ್ ಯುನಿಟ್‌ಗಳನ್ನು ಸಾಗಾಣಿಕೆ ಮಾಡುವಂತಹ ಗ್ರಾಮ ಲೆಕ್ಕಾಧಿಕಾರಿಳಿಗೂ ಸಹ ಬಣ್ಣಗಳ ಟೀ ಶರ್ಟ್ ನೀಡಲಾಗುವುದು. 8 ವಿಧಾನಸಭಾ ಕ್ಷೇತ್ರದ ಕೊಠಡಿಗೂ ತಲಾ ಒಬ್ಬರಂತೆ ಜಿಲ್ಲಾ ಸಮಾಲೋಚಕ, ತಾಲೂಕು ಕಚೇರಿಯ ಐಟಿ ಸಮಾಲೋಚಕ, ಡೇಟಾ ಎಂಟ್ರಿ ಆಪರೇಟರ್ ನೇಮಿಸಲಾಗಿದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಬಿಎಸ್‌ಎನ್‌ಎಲ್ ಹಾಗೂ ಜಿಯೋ ಕಂಪೆನಿಯ ಇಂಟರ್‌ನೆಟ್ ಸೌಲಭ್ಯ, ಮೂರು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ನಿರಂತರ ಸಮರ್ಪಕ ವಿದ್ಯುತ್ ಸಂಪರ್ಕ ಹಾಗೂ 123 ವೆಬ್‌ಕ್ಯಾಸ್ಟಿಂಗ್ ಕ್ಯಾಮೆರಾ ಸೇರಿದಂತೆ ಒಂದೊಂದು ಕೊಠಡಿಗೂ 360 ಡಿಗ್ರಿ ತಿರುಗುವ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ವಿವರಿಸಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net