ಅನುದಾನದ ವೆಚ್ಚ ಪಾರದರ್ಶಕವಾಗಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

DC preliminary meeting Mandya
Published on

ಮಂಡ್ಯ: ಮಂಡ್ಯ ನಗರದಲ್ಲಿ ಡಿ.20, 21 ಮತ್ತು 22ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗೆ ಬಿಡುಗಡೆಯಾಗುವ ಅನುದಾನವನ್ನು ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ವೆಚ್ಚ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಚಾಲಕರು ಹಾಗೂ ಸದಸ್ಯ ಕಾರ್ಯದರ್ಶಿ ತಮ್ಮ ಸಮಿತಿಗೆ ಬಿಡುಗಡೆಯಾಗುವ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಮಾತ್ರವಲ್ಲದೆ ಸಮಿತಿಯಲ್ಲಿ ಮಂಡಿಸಿ ಸಾಹಿತ್ಯ ಸಮ್ಮೇಳನದ ವಿಶೇಷಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು.

ಕ್ರಿಯಾ ಯೋಜನೆ ವಿಸ್ತೃತವಾಗಿರಬೇಕು. ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿಯಲ್ಲಿ ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಕೆಲಸ ಪ್ರಾರಂಭಿಸಬೇಕು. ಸಮಿತಿಯಿಂದ ಭರಿಸಲ್ಪಡುವ ವೆಚ್ಚಕ್ಕೆ ಸಂಬಂಧಿಸಿದ ದಾಖಲೆಯನ್ನು ಧೃಡೀಕರಣ ಪಡಿಸಿ ಹಣಕಾಸು ಸಮಿತಿಗೆ ಸಲ್ಲಿಸಬೇಕು. ಸಮ್ಮೇಳನದ ಆತಿಥ್ಯ ದೊರಕಿರುವುದು ಗೌರವ ತಂದು ಕೊಡುವ ವಿಷಯವಾಗಿದೆ. ಆದ್ದರಿಂದ ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಿ. ಜಿಲ್ಲೆಯ ಎಲ್ಲ ಸಾರ್ವಜನಿಕರ, ಸಂಘ ಸಂಸ್ಥೆಗಳ ವಿಶ್ವಾಸ ಪಡೆದು ಸಭೆ ನಡೆಸಿ ಎಂದರು.

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ 28 ಸಮಿತಿ ರಚನೆಯಾಗಿದ್ದು, ಪ್ರತಿ ಸಮಿತಿಗೆ ಸರ್ಕಾರಿ ಅಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿ ಹಾಗೂ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಸಮ್ಮೇಳನವು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಸಣ್ಣ ಪುಟ್ಟ ತೊಂದರೆಗಳು ಬಾರದಂತೆ ಸರಿದೂಗಿಸಿಕೊಂಡು ಎಲ್ಲರ ಸಹಕಾರದಿಂದ ಸಮ್ಮೇಳನದ ಕೀರ್ತಿ ಎಲ್ಲೆಡೆ ಪಸರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಕಸಾಪ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net