ಡಿ.ಸಿ ಪಾವಟೆ ಕಾಲೇಜಿನಲ್ಲಿ ಕರ್ನಾಟಕ ಏಕೀಕರಣ ವೀರರ ಯಶೋಗಾಥೆ ಕುರಿತು ಉಪನ್ಯಾಸ

28GDG07
Published on

ನಿಟ್ಟೂರು ಶ್ರೀನಿವಾಸರಾಯರ ಬದುಕು ಆದರ್ಶಮಯವಾದದ್ದು : ಡಾ.ರಶ್ಮಿ ಅಂಗಡಿ
ಗದಗ : ಭಾರತದ ಸ್ವಾತಂತ್ರ‍್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರಾದ ಶ್ರೀ ನಿಟ್ಟೂರು ಶ್ರೀನಿವಾಸರಾಯರು 101 ವರ್ಷಗಳ ತುಂಬು ಜೀವನವನ್ನು ಸಾಗಿಸಿದ್ದರು, ಅವರ ಬದುಕು ಎಲ್ಲರಿಗೂ ಆದರ್ಶಮಯವಾದುದು ಎಂದು ಕಸಾಪ ತಾಲೂಕಾ ಅಧ್ಯಕ್ಷರಾದ ಡಾ.ರಶ್ಮಿ ಅಂಗಡಿ ನುಡಿದರು.
ಅವರು ಇತ್ತೀಚೆಗೆ ನಗರದ ಡಿ.ಸಿ ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಭೈರನಟ್ಟಿ, ಗದಗ ಜಿಲ್ಲಾ ಕ.ಸಾ.ಪ ಮತ್ತು ಗದಗ ತಾಲೂಕ ಕ.ಸಾ.ಪ ವತಿಯಿಂದ ಜರುಗಿದ ಕರ್ನಾಟಕ ಏಕೀಕರಣ ವೀರರ ಯಶೋಗಾಥೆ ಅಡಿಯಲ್ಲಿ ನಿಟ್ಟೂರು ಶ್ರೀನಿವಾಸರಾಯರ ಕುರಿತು ಉಪನ್ಯಾಸ ನೀಡಿ,
ವಿಜ್ಞಾನದಲ್ಲಿ ಆಸಕ್ತಿ ಇದ್ದ ಶ್ರೀನಿವಾಸರಾಯರು ತಂದೆಯ ಅನಾರೋಗ್ಯದ ಕಾರಣದಿಂದ ಮದರಾಸಿನ ಕಾನೂನು ಮಹಾವಿದ್ಯಾಲಯಕ್ಕೆ ತೆರಳಿ ಅಲ್ಲಿ ಕಾನೂನು ಓದಿದರು. ಬೆಂಗಳೂರಿನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದ ಅವರು ಕೆಲವೇ ವರ್ಷದಲ್ಲಿ ಶ್ರೇಷ್ಠ ವಕೀಲರಾಗಿ ಹೆಸರುವಾಸಿಯಾದರು, ಆ ನಂತರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅವರು ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಗಾಂಧೀಯವರ ಗಾಢ ಪ್ರಭಾವದಿಂದ ತಮ್ಮ 18ನೆಯ ವಯಸ್ಸಿನಲ್ಲಿಯೇ ಸ್ವಾತಂತ್ರ‍್ಯ ಚಳುವಳಿಗೆ ಧುಮುಕಿದ್ದ ಅವರು ತಮ್ಮ ಪತ್ನಿಯಾದ ಪದ್ಮಾವತಿಯವರೊಡನೆ ಸೇರಿಕೊಂಡು ಗಾಂಧೀಜಿಯವರು ಗುಜರಾತಿಯಲ್ಲಿ ಬರೆದ ಲೇಖನಗಳನ್ನು ಮತ್ತು ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಮೊಟ್ಟ ಮೊದಲು ಸತ್ಯ ಸಂಶೋಧನೆ ಎನ್ನುವ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಡಿ.ವಿ.ಜಿ ಯವರಿಂದ, ಗೋಖಲೆ ಅವರಿಂದ ಪ್ರಭಾವಿತರಾಗಿ ಅವರ ಹೆಸರಿನ ಸಂಸ್ಥೆಗಳನ್ನು ಹುಟ್ಟು ಹಾಕಿ ಸ್ವಾತಂತ್ರ‍್ಯ ಹೋರಾಟಕ್ಕೆ ಕೊಡುಗೆ ನೀಡಿದರು. ಕನ್ನಡದ ಅಂದಿನ ಬಹುತೇಕ ಹಿರಿಯ ಸಾಹಿತಿಗಳ ಜೊತೆ ಸ್ನೇಹ ಸಂಪರ್ಕ ಹೊಂದಿದ್ದ ಅವರು ಶಿವರಾಮ ಕಾರಂತ ಅವರ ಬಾಲ ಪ್ರಪಂಚ ಸೇರಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ನಾಡು ನುಡಿ ಮತ್ತು ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಅವರ ಕಾರ್ಯ ಸ್ಮರಣೀಯ ಎಂದರು.
ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿAಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಡಿ.ಸಿ ಪಾವಟೆ ಕಾಲೇಜಿನ ಪ್ರಾಚಾರ್ಯರಾದ ಎಸ್.ಪಿ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಭೈರನಟ್ಟಿಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಆರ್.ಕೆ ಐನಾಪೂರ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್ ಪಲ್ಲೇದ ಹಾಗೂ ಶಿಕ್ಷಕರಾದ ಕೆ.ಸಿ ಪಟ್ಟಣಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಸಾಪ ಕೋಶಾಧ್ಯಕ್ಷರಾದ ಡಿ.ಎಸ್ ಬಾಪೂರಿ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಬಿ ಸಂಕನಗೌಡರ ನಿರೂಪಿಸಿದರು. ಗಿರಿಜಾ ಹಸಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net