ಕೂಲಿ ಕಾರ್ಮಿಕರಿಗೆ ಸೌಕರ್ಯ ಒದಗಿಸಿ: ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

mandya dc kumar
Published on

ಮಂಡ್ಯ: ಜಿಲ್ಲೆಯಲ್ಲಿ ಕಬ್ಬು ಅರೆಯುವಿಕೆ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಪ್ರಾರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮಾಡಲೆಂದು ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಕೂಲಿ ಕಾರ್ಮಿಕರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಮೂಲ ಸೌಕರ್ಯ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದ್ದಾರೆ.

ಈ ಕುರಿತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಆದೇಶ ಹೊರಡಿಸಿರುವ ಡಿಸಿ, ಕಾರ್ಮಿಕರಿಗೆ ಕಾರ್ಖಾನೆಗಳ ಮೂಲಕ ಸುಸಜ್ಜಿತವಾದ ಮತ್ತು ವಾಸಕ್ಕೆ ಯೋಗ್ಯವಾದ ಸ್ಥಳಗಳಲ್ಲಿ ವಾಸದ ಮನೆಗಳ ವ್ಯವಸ್ಥೆ ಮಾಡಬೇಕು. ಜತೆಗೆ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶುದ್ಧ ಆಹಾರ, ತಾತ್ಕಾಲಿಕ ಶೌಚಗೃಹ ಹಾಗೂ ಇತರೆ ಸೌಲಭ್ಯ ಒದಗಿಸುವುದು. ಪ್ರಮುಖವಾಗಿ ಮಳೆಗಾಲವಾಗಿರುವುರಿಂದ ಕೂಲಿ ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಪ್ರಸ್ತುತ ಡೆಂೆ, ಮಲೇರಿಯಾ, ಚಿಕೂನ್ ಗುನ್ಯಾ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಕಾರ್ಮಿಕರು ವಾಸ ಮಾಡುವ ಸ್ಥಳಗಳಲ್ಲಿ ಶುಚಿತ್ವಕ್ಕೆ ಬೇಕಾಗುವ ಸವಲತ್ತುಗಳನ್ನು ನೀಡಿ ಕಾಲಕಾಲಕ್ಕೆ ರೋಗ ನಿಯಂತ್ರಣ ಸಿಂಪಡಣೆಗಳನ್ನು ಸಿಂಪಡಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸಬೇಕು. ಕೂಲಿ ಕಾರ್ಮಿಕರ ಜತೆ ಆಗಮಿಸುವ ಅವರ ಕುಟುಂಬದ ಸದಸ್ಯರು ವೃದ್ಧರಾಗಿದ್ದಲ್ಲಿ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಿ.ಪಿ, ಷುಗರ್ ಹಾಗೂ ಇತರೆ ಕಾಯಿಲೆಗಳಿದ್ದಲ್ಲಿ ಚಿಕಿತ್ಸಾ ಸೌಲಭ್ಯ ನೀಡಬೇಕು. ಆರು ವರ್ಷದೊಳಗಿನ ಮಕ್ಕಳಿದ್ದಲ್ಲಿ ವ್ಯಾಕ್ಸಿನ್ ನೀಡಲು ಸ್ಥಳೀಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಕಾಲಕಾಲಕ್ಕೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಮಾತ್ರವಲ್ಲದೆ ಆ ಮಕ್ಕಳು ಕೂಲಿ ಕಾರ್ಮಿಕರೊಂದಿಗೆ ಕಬ್ಬು ಕಟಾವಿಗೆ ಹೋಗದಂತೆ ನಿರ್ಬಂಧ ವಿಧಿಸಬೇಕು. ಅಂತೆಯೇ ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

6 ರಿಂದ 14 ವರ್ಷದೊಳಗಿನ ಮಕ್ಕಳು ಕೂಲಿ ಕಾರ್ಮಿಕರೊಂದಿಗೆ ಬಂದಲ್ಲಿ ಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಬೇಕು. ಹಾಗೂ ತಾಲೂಕು ಶಿಕ್ಷಣ ಅಧಿಕಾರಿಗಳ ಜತೆ ಸಮನ್ವಯವನ್ನು ಸಾಧಿಸಿಕೊಂಡು ಈ ಕಾರ್ಯವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕೂಲಿ ಕಾರ್ಮಿಕರ ಜತೆ ಆಗಮಿಸುವ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸ್ಥಳೀಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸರ್ಕಾರಿ ಘೋಷಣಾ ಸೌಲಭ್ಯಗಳನ್ನು ಕಾಲ ಕಾಲಕ್ಕೆ ದೊರಕಿಸಿಕೊಡಬೇಕು. ಕೂಲಿ ಕಾರ್ಮಿಕರು ಮಧ್ಯವರ್ತಿಗಳ ಕಮಿಷನ್ ಹಾವಳಿಗೆ ತುತ್ತಾಗುವುದರಿಂದ ಕಾರ್ಖಾನೆ ಅವರು ನೇರವಾಗಿ ಈಗಾಗಲೇ ಸರ್ಕಾರ ನಿರ್ದಿಷ್ಟ ಪಡಿಸಿರುವ ಕೂಲಿ ದರಗಳಂತೆ ತಮ್ಮ ಕಾರ್ಖಾನೆ ವ್ಯಾಪ್ತಿಯಲ್ಲಿ ಯಥಾವತ್ತಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಕಾರ್ಮಿಕ ಇಲಾಖೆಯಿಂದ ಕೂಲಿ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸುವುದು. ಕಬ್ಬು ಕಟಾವು ಮಾಡಲು ಸುರಕ್ಷಾ ಶೂಗಳು. ಸಾಧನಗಳು, ಗೌಸ್‌ಗಳನ್ನು ತಮ್ಮ ವ್ಯಾಪ್ತಿಯಲ್ಲಿ ನೀಡುವಂತೆ ಆದೇಶಿಸಿದ್ದಾರೆ.

ಇದಲ್ಲದೆ ಕೂಲಿ ಕಾರ್ಮಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೂಲಿ ಆಧಾರದ ಮೇಲೆ ವಲಸೆ ಹೋಗುವುದರಿಂದ ಎಲ್ಲ ಸೌಲಭ್ಯಗಳು ಯಥಾವತ್ತಾಗಿ ಜಾರಿಯಾಗಲು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಕೆಲಸ ಮುಗಿಸಿಕೊಂಡು ತಮ್ಮ ಊರುಗಳಿಗೆ ಸೇರುವವರೆಗೂ ಆಯಾ ವ್ಯಾಪ್ತಿಯ ಕಾರ್ಖಾನೆಗಳಿದ್ದೇ ಸಂಪೂರ್ಣ ಜವಾಬ್ದಾರಿಯಾಗಿದ್ದು, ಯಾವುದೇ ಪ್ರಾಣ ಹಾನಿ ಹಾಗೂ ಇನ್ನಿತರ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು. ಸಕ್ಕರೆ ಕಾರ್ಖಾನೆಗಳಿಗೆ ನೀಡಿರುವ ನಿರ್ದೇಶನದಂತೆ ಸೌಲಭ್ಯಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮ ಮತ್ತು ಸೌಲಭ್ಯಗಳನ್ನು ನೀಡಲು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಪ್ರತಿ ಮಾಹೆವಾರು ಸಂಬಂಧಿಸಿದ ಕಾರ್ಖಾನೆಗಳ ಜತೆ ಸಭೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net