ಸದ್ಯದಲ್ಲೇ ಸಿಎಂ ಗಡಿ ಜಿಲ್ಲೆ ಪ್ರವಾಸ: ದ.ಕ.ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಮುಖ್ಯಮಂತ್ರಿ ಮೆಚ್ಚುಗೆ

dc
Published on

ಮಂಗಳೂರು: ಕರೊನಾ ಸೋಂಕು ನಿರ್ವಹಣೆಯಲ್ಲಿ ದ.ಕ.ಜಿಲ್ಲಾಡಳಿತದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದೆ ಗಡಿ ಪ್ರದೇಶಗಳಿಗೆ ಪ್ರವಾಸ ಕೈಗೊಂಡು, ಅಲ್ಲಿನ ಕೋವಿಡ್ ಸ್ಥಿತಿಗತಿ ಅವಲೋಕನ ನಡೆಸುವ ಭರವಸೆ ನೀಡಿದ್ದಾರೆ.

ದ.ಕ.ಸೇರಿದಂತೆ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ತಮ್ಮ ಗೃಹ ಕಚೇರಿಯಿಂದ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು,

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಅವರನ್ನು ಅಭಿನಂದಿಸಿದರು. ಜಿಲ್ಲೆಯ ಗಡಿ ಭಾಗಗಳಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಬೇಕು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವಂತೆಯೂ ನಿರ್ದೇಶನ ನೀಡಿದರು.

ಕೋವಿಡ್‌ಗೆ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕದ 17 ಘಟಕಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, 8 ಆಮ್ಲಜನಕ ಘಟಕಗಳ ಅನುಷ್ಠಾನ ಪೂರ್ಣಗೊಂಡಿದೆ, ಉಳಿದ ಘಟಕಗಳನ್ನು ಮುಂದಿನ 2 ವಾರಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಡಿಸಿ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು.

ಈ ವೇಳೆ ಸಿಎಂಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬರುವ ಒಂದು ವಾರ ಕೇರಳ ರಾಜ್ಯದ ಕಾಸರಗೋಡಿಗೆ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ನಿಷೇಧ, ಅಲ್ಲಿಂದ ಬಂದ ವಿದ್ಯಾರ್ಥಿಗಳಿಗೆ ಒಂದು ವಾರ ಕ್ವಾರಂಟೈನ್, ಗಡಿ ಭಾಗದಲ್ಲಿ 12 ಕಡೆ ಚೆಕ್‌ಪೋಸ್ಟ್, ವೈದ್ಯಕೀಯ ತುರ್ತು ಸೇವೆ ಹೊರತುಪಡಿಸಿ, ಇತರ ಸಂಚಾರವನ್ನು ನಿಷೇಧಿಸಲಾಗುತ್ತಿದೆ ಎಂದರು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿ.ಪಂ ಸಿಇಒ ಡಾ.ಕುಮಾರ್, ಎಡಿಸಿ ಪ್ರಜ್ಞಾ ಅಮ್ಮೆಂಬಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net