

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದ ಶೌಚಗೃಹಗಳ ನಿರ್ವಹಣೆಗೆ ಕಡೆಗೂ ಕಾಲ ಕೂಡಿ ಬಂದಿದೆ. ನೀರು ಸೋರುತ್ತಿರುವ ಕೊಳಾಯಿಗಳನ್ನು ಬದಲಿಸಲಾಗುತ್ತಿದೆ. ಕಿತ್ತುಹೋದ ಶೌಚಗೃಹದ ಕಮೋಡ್‌ಗಳನ್ನು ಬದಲಿಸಿ ಹೊಸ ಕಮೋಡ್‌ಗಳನ್ನು ಹಾಕಲಾಗುತ್ತಿದೆ. ಮುಖ್ಯವಾಗಿ ಗೋದಾಮಿನಂತೆ ಬಳಕೆಯಾಗುತ್ತಿದ್ದ ವಿಕಲಚೇತನರ ಪ್ರತ್ಯೇಕ ಶೌಚಗೃಹ ಸ್ವಚ್ಛಗೊಂಡಿದ್ದು ಬಳಕೆಗೆ ಮುಕ್ತವಾಗಿದೆ.
‘ ಗಬ್ಬುನಾರುತ್ತಿವೆ ಶಕ್ತಿಸೌಧದ ಶೌಚಗೃಹಗಳು’ ಶೀರ್ಷಿಕೆಯಡಿ ಏ.5ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕೂಡಲೇ ನಿರ್ವಹಣೆ ಹೊಣೆ ಹೊತ್ತವರಿಗೆ ಅವ್ಯವಸ್ಥೆ ಸರಿಪಡಿಸುವಂತೆ ತಾಕೀತು ಮಾಡಿದ್ದರು. ಅದರಂತೆ ಶೌಚಗೃಹಗಳಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು ಸ್ವಚ್ಛತೆಗೆ ಆದ್ಯತೆ ನೀಡಲು ಸಿಬ್ಬಂದಿ ಮುಂದಾಗಿದ್ದಾರೆ.
ಕೊಳಾಯಿ ಕಳವು!
ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಓಡಾಡುವ ಜಿಲ್ಲಾಡಳಿತ ಭವನದಲ್ಲಿ ಶೌಚಗೃಹಗಳಲ್ಲಿನ ಕೊಳಾಯಿ, ಪೈಪ್, ವಾಟರ್‌ಗನ್ ಮತ್ತಿತರ ಪರಿಕರಗಳ ಕಳವು ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೊಳಾಯಿಗಳನ್ನು ಮುರಿಯುವುದು ಕನ್ನಡಿ ಒಡೆಯುವುದು ಮತ್ತಿತರ ಕಿಡಿಗೇಡಿ ಕೆಲಸ ಮಾಡುತ್ತಾರೆ ಎಂಬುದು ನಿರ್ವಹಣೆ ಹೊಣೆಹೊತ್ತವರ ದೂರಾಗಿದೆ. ಅಲ್ಲದೆ ಕೆಲವು ಸಿಬ್ಬಂದಿಯೂ ಇಂಥ ಕೃತ್ಯ ನಡೆಸುವುದರಿಂದ ಪ್ರಮುಖವಾಗಿ ನೀರಿನ ಸೋರಿಗೆ ಮತ್ತಿತರ ಅವ್ಯವಸ್ಥೆಗೆ ಕಾರಣವಾಗುತ್ತಿದೆ ಎಂದು ನಿರ್ವಹಣಾ ಸಿಬ್ಬಂದಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮುಕ್ತಗೊಂಡ ವಿಕಲಚೇತನ ಶೌಚಗೃಹ:
ಜಿಲ್ಲಾಡಳಿತಭವನದ ಮೂರನೇ ಎರಡನೇ ಮಹಡಿಯಲ್ಲಿ ವಿಕಲಚೇತನರಿಗಾಗಿಯೇ ಪ್ರತ್ಯೇಕ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಸಾಮಾನ್ಯವಾಗಿ ವಿಕಲಚೇತನರು ಎರಡನೆ ಮಹಡಿಗೆ ಬರುವುದು ಅಪರೂಪ ಎಂಬ ಕಾರಣಕ್ಕೆ ಜಿಲ್ಲಾಡಳಿತ ಸಿಬ್ಬಂದಿಯೇ ಶೌಚಗೃಹದ ಕೊಠಡಿಗಳನ್ನು ಹಳೆ ವಸ್ತುಗಳನ್ನು ದಾಸ್ತಾನು ಮಾಡುವ ಗೋದಾಮಿನಂತೆ ಬಳಸುತ್ತಿದ್ದರು ಎನ್ನಲಾಗಿದೆ. ವಿಜಯವಾಣಿ ವರದಿ ಬಳಿಕ ಕಸಕಡ್ಡಿಗಳನ್ನು ತೆರವುಗೊಳಿಸಿ ವಿಕಲಚೇತನರಿಗೆ ಶೌಚಗೃಹವನ್ನು ಮುಕ್ತಗೊಳಿಸಲಾಗಿದೆ.
ಶೌಚಗೃಹಗಳ ನಿರ್ವಹಣೆ ನಿರಂತರವಾಗಿರಬೇಕು, ಯಾವಾಗಲೂ ಬಂದು ರಿಪೇರಿ ಮಾಡುವುದು ಸ್ವಚ್ಛ ಮಾಡಿ ಹೋಗುವುದು ಸರಿಯಲ್ಲ. ಪ್ರತಿನಿತ್ಯ ಶೌಚಗೃಹಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಇಲ್ಲವಾದರೆ ಇವೇ ಶೌಚಗೃಹಗಳು ರೋಗ ಹರಡುವ ತಾಣವಾಗಿ ಪರಿಣಮಿಸುತ್ತವೆ ವಿಜಯವಾಣಿ ಕಾಳಜಿಯಿಂದ ಶೌಚಗೃಹಗಳು ಸ್ವಚ್ಛಗೊಳ್ಳುತ್ತಿವೆ ಪತ್ರಿಕೆಗೆ ಧನ್ಯವಾದಗಳು.
ಹೆಸರೇಳಲಿಚ್ಛಿಸದ ಮಹಿಳಾ ಸಿಬ್ಬಂದಿ ಜಿಲ್ಲಾಡಳಿತಭವನ