

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕೊಳಾಯಿಗಳಲ್ಲಿ ಸೋರುತ್ತಿರುವ ನೀರು ನಿಲ್ಲಲ್ಲ, ಮತ್ತೊಂದೆಡೆ ಕೊಳಾಯಿಗಳಲ್ಲಿ ನೀರೇ ಬರಲ್ಲ..! ಕೊಳಾಯಿ ತಿರುಗಿಸಲು ಹೋದರೆ ಕೊಳಾಯಿಗಳೇ ಕಿತ್ತು ಕೈಗೆ ಬರುತ್ತವೆ. ಗೋಡೆಗಳ ಮೇಲೆ ಗುಟ್ಕಾಗಳ ಚಿತ್ತಾರ, ಒಡೆದ ಕನ್ನಡಿಗಳು, ಒಳಗೆ ಕಾಲಿಟ್ಟರೆ ಮೂಗಿಗೆ ರಾಚುವ ಗಬ್ಬುವಾಸನೆ…
ಇದು ಜಿಲ್ಲಾಡಳಿತಭವನದಲ್ಲಿನ ಶೌಚಗೃಹದ ವಾಸ್ತವ ದುಸ್ಥಿತಿ. ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಗ್ರಾಮಾಂತರ ಜಿಲ್ಲೆಯ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತಭವನದಲ್ಲಿ ಶೌಚಗೃಹಗಳ ನಿರ್ವಹಣೆ ಕಡೆಗಣಿಸ್ಪಟ್ಟಿದೆ.
ಸ್ವಚ್ಛತೆ ಬಗ್ಗೆ ಪಾಠ ಮಾಡುವ ಶಕ್ತಿಸೌಧದಲ್ಲೆ ಅನೈರ್ಮಲ್ಯ ತಾಂಡವಾಡುತ್ತಿದೆ. ಜಿಲ್ಲಾಡಳಿತಭವನ ನಿರ್ಮಾಣವಾದ ಕಾಲದಿಂದಲೂ ಇಲ್ಲಿನ ಶೌಚಗೃಹಗಳ ನಿರ್ವಹಣೆ ಕಡೆಗಣಿಸಲ್ಪಟ್ಟಿದೆ. ಕಟ್ಟಡದಲ್ಲಿ ಇಲಾಖೆಗಳು ಕಾರ್ಯಾರಂಭ ಮಾಡಿದ ಆರಂಭದಲ್ಲಿ ನೀರಿನ ಕೊರತೆಯಿಂದ ಶೌಚಗೃಹಗಳು ಬಳಸುವಂತ ಪರಿಸ್ಥಿತಿ ಇರಲಿಲ್ಲ. ಆರೇಳು ತಿಂಗಳ ಬಳಿಕ ನೀರಿನ ವ್ಯವಸ್ಥೆ ಸರಿಪಡಿಸಲಾಯಿತಾದರೂ ನಿರ್ವಹಣೆ ಕಡೆಗೆ ಗಮನ ನೀಡುವ ಗೋಡವೆಗೆ ಹೋಗಿಲ್ಲ.
ಸ್ವಚ್ಛತಾ ಸಿಬ್ಬಂದಿ ಮಾಯ: ಜಿಲ್ಲಾಡಳಿತಭವನದಲ್ಲಿನ ಅಷ್ಟೂ ಶೌಚಗೃಹಗಳ ಸ್ವಚ್ಛತಾ ಹೊಣೆ ಹೊತ್ತ ಸಿಬ್ಬಂದಿ ಹಲವು ತಿಂಗಳಿಂದ ಕಾಣುತ್ತಲೇ ಇಲ್ಲ ಎಂಬುದು ಇಲ್ಲಿನ ಸಿಬ್ಬಂದಿಯ ಆರೋಪವಾಗಿದೆ. ಶೌಚಗೃಹ ಬಳಸಲು ಒಳಹೊಕ್ಕರೆ ಮೂಗುಮುಚ್ಚಿಕೊಂಡೇ ಹೋಗಬೇಕಿದೆ. ಕಮೋಡ್‌ಗಳು ಕಪ್ಪನೆ ಬಣ್ಣಕ್ಕೆ ತಿರುಗಿವೆ. ಅನೈರ್ಮಲ್ಯದಿಂದಾಗಿ ಶೌಚಗೃಹ ಸೊಳ್ಳೆನೊಣಗಳ ತಾಣವಾಗಿ ರೂಪುಗೊಂಡಿದೆ. ಪ್ರತಿನಿತ್ಯ ಸ್ವಚ್ಛಗೊಳಿಸಬೇಕಾದ ಸಿಬ್ಬಂದಿ ಆರೇಳು ತಿಂಗಳಿಂದ ಇತ್ತ ಕಡೆ ಸುಳಿದಿಲ್ಲದಿರುವುದರಿಂದ ಶೌಚಗೃಹಗಳ ಸ್ಥಿತಿ ಶೋಚನೀಯವಾಗಿದೆ.
ನೀರು ಪೋಲು: ಶೌಚಗೃಹದಲ್ಲಿನ ಅನೇಕ ಕೊಳಾಯಿಗಳು ಕಿತ್ತುಬಂದಿವೆ, ಇದರಿಂದ ದಿನದ 24 ಗಂಟೆ ನೀರು ಸೋರಿಕೆಯಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ನೀರಿಗೆ ಪರದಾಟ ಎದುರಾಗಿದೆ. ಆದರೆ ಜಿಲ್ಲಾಡಳಿತಭವನದ ಶೌಚಗೃಹಗಳಲ್ಲಿ ನೀರು ಪೋಲಾಗುತ್ತಿದ್ದರೂ ಈ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಇನ್ನು ಕೆಲವು ಕೊಳಾಯಿಗಳಲ್ಲಿ ನೀರೆ ಬರುವುದಿಲ್ಲವಾದ್ದರಿಂದ ನಿತ್ಯಕರ್ಮ ಮುಗಿಸಿದ ಬಳಿಕ ನೀರು ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಲ್ಲಿನ ವಾತಾವರಣ ಸಂಪೂರ್ಣ ಕಲುಷಿತವಾಗಿದೆ. ಶೌಚಗೃಹಗಳಲ್ಲಿ ಅಳವಡಿಸಿರುವ ಕನ್ನಡಿಗಳು ಒಡೆದಿವೆ ಅವುಗಳನ್ನು ತೆರವುಗೊಳಿಸುವ ಕೆಲಸವೂ ಅಗಿಲ್ಲ. ಕೆಲವು ಆಗಲೋ ಈಗಲೋ ಗೋಡೆಯಿಂದ ಕಳಚಿ ಬೀಳುವ ಪರಿಸ್ಥಿತಿ ಇದೆ. ಕನ್ನಡಿ ಕೆಳಗೆ ಅಳವಡಿಸಿರುವ ಕೈ ತೊಳೆದುಕೊಳ್ಳುವ ವಾಷ್‌ಬೇಸಿನ್‌ಗಳು ಹಾಳಾಗಿವೆ ಕಿತ್ತು ಬಿದ್ದಿರುವ ವಾಷ್‌ಬೇಸನಿನ್‌ಗಳನ್ನು ಶೌಚಗೃಹಗಳಲ್ಲೆ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಇನ್ನು ಎಕ್ಸಿಸ್ಟ್ ್ಯಾನ್‌ಗಳು ಕೆಟ್ಟುಹೋಗಿದ್ದು ಶೌಚಗೃಹದಲ್ಲಿ ಕಾಲಿಡಲೂ ಆಗದಂತ ದುಸ್ಥಿತಿ ಎದುರಾಗಿದೆ.
ವಿಕಲಚೇತನರ ಶೌಚಗೃಹ ಬಂದ್: ಇನ್ನು ವಿಕಲಚೇತನರಿಗಾಗಿಯೇ ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಶೌಚಗೃಹಗಳು ಇದುವರೆಗೆ ಬಳಸಲು ಮುಕ್ತವಾಗಿಯೇ ಇಲ್ಲ. ಶೌಚಗೃಹದ ಬಾಗಿಲಿನಲ್ಲಿ ವಿಕಲಚೇತನರಿಗೆ ಎಂಬ ನಾಮಲಕ ಹಾಕಲಾಗಿದೆ ಆದರೆ ಒಳಗೆ ಕಮೋಡ್‌ಗಳು ಇದ್ದರೂ ನೀರಿನ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ ಜಿಲ್ಲಾಡಳಿತಭವನದ ಒಣ ತ್ಯಾಜ್ಯ ತುಂಬುವ ಗೋದಾಮಿನಂತೆ ಬಳಕೆಯಾಗುತ್ತಿದೆ. ಬಾಗಿಲು ತೆಗೆದರೆ ರಪ್ಪನೆ ಗಬ್ಬುವಾಸನೆ ಮೂಗಿಗೆ ಬಡಿಯುತ್ತದೆ.
ಜಿಲ್ಲಾಡಳಿತ ಸಿಬ್ಬಂದಿ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಬಿಜಿಯಾಗಿದ್ದಾರೆ, ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಧಿಕಾರಿಗಳನ್ನು ಹುಡುಕಾಡುವುದೇ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಇದರ ಮಧ್ಯೆ ಇಲ್ಲಿನ ಶೌಚಗೃಹದ ಪರಿಸ್ಥಿತಿಯನ್ನು ಗಮನಿಸುವವರೇ ಇಲ್ಲದಂತಾಗಿದೆ. ಇಲ್ಲಿನ ಶೌಚಗೃಹಗಳು ರೋಗ ಹರಡುವ ತಾಣವಾಗಿ ರೂಪುಗೊಂಡಿದೆ. ಗಬ್ಬುವಾಸನೆಗೆ ಒಳಗೆ ಕಾಲಿಡಲೇ ಸಾಧ್ಯವಾಗುವುದಿಲ್ಲ.
ಕೆಂಪರಾಜು, ಬೀರಸಂದ್ರ ನಿವಾಸಿ
ಜಿಲ್ಲಾಡಳಿತಭವನ ಕಾರ್ಯಾರಂಭ ಮಾಡಿದ ಆರಂಭದಿಂದಲೂ ಇಲ್ಲಿನ ಶೌಚಗೃಹಗಳ ನಿರ್ವಹಣೆ ಕಡೆಗಣಿಸಲ್ಪಟ್ಟಿದೆ. ಈ ಬಗ್ಗೆ ಹಲವು ಬಾರಿ ನಿರ್ವಹಣೆ ಹೊಣೆ ಹೊತ್ತವರ ಗಮನಕ್ಕೆ ತರಲಾಗಿದೆ, ಆದರೆ ಈ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಗತಿ ಇಲ್ಲದೆ ಇಂಥ ಪರಿಸ್ಥಿತಿಯಲ್ಲೇ ಶೌಚಗೃಹಗಳನ್ನ ಬಳಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಹೆಸರೇಳಲಿಚ್ಛಿಸದ ಮಹಿಳಾ ಸಿಬ್ಬಂದಿ