ಭಾರತ ಎಂಬುದು ದೈವಲೋಕ: ನಿರ್ಭಯಾನಂದ ಸರಸ್ವತಿ ಶ್ರೀಗಳು

12GDG04
ಗದಗ ಜಿಲ್ಲಾಡಳೀತ ಭವನದಲ್ಲಿ ಏರ್ಪಡಿಸಿದ್ದ ಸ್ವಾಮೀ ವಿವೇಕಾನಂದ ಅವರ ಜಯಂತಿಯನ್ನು ನಿರ್ಭಯಾನಂದ ಸರಸ್ವತಿ ಶ್ರೀಗಳು ಮತ್ತು ಎಚ್​.ಕೆ. ಪಾಟೀಲ ಉದ್ಘಾಟಿಸಿದರು. ಪುನೀತ್​ ಮಹಾರಾಜರು, ವೈಶಾಲಿ ಎಂ. ಎಲ್​, ಬಿ. ಎಸ್​.ನೇಮಗೌಡ, ಡಿ. ಆರ್​. ಪಾಟೀಲ ಇತರರು ಇದ್ದರು.
Published on

ಗದಗ: ವೇದಗಳನ್ನು ಭಾಷಾಂತರ ಮಾಡುವ ಸಂದರ್ಭದಲ್ಲಿ ಭಾರತ ಎಂಬುದು ಕೇವಲ ಭೌಗೋಳಿಕವಾಗಿದ್ದಲ್ಲ, ಇದೊಂದು ದೇವಲೋಕ ಎಂಬುದು ವಿದೇಶಿ ಪಂಡಿತರಿಗೆ ಅರ್ಥವಾಗಿತ್ತು. ಆದರೆ, ನವ ಭಾರತೀಯರಿಗೆ ದೇಶದ ಹಿರಿಮೆ ಗರಿಮೆ ಕುರಿತು ಅರ್ಥವಾಗುತ್ತಿಲ್ಲ ಎಂದು ರಾಮಕೃಷ್ಣ ಆಶ್ರಮ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.


ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮೀ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೇದಗಳಲ್ಲಿ ಹೇಳಿದ್ದನ್ನು ಸ್ವಾಮೀ ವಿವೇಕಾನಂದರು ಹೇಳಿದ್ದರು. ವಿದೇಶಿ ಸಂಸತಿಗೆ ಯುವಕರು ಬಲಿಯಾಗಿ ದೇಶದ ಮೂಲ ಸಂಸತಿಯನ್ನು ಮರೆಯುತ್ತಿರುವುದಕ್ಕೆ ಅವರು ದುಃಖ ಪಟ್ಟಿದ್ದರು. ವಿವೇಕಾನಂದರ ಕುರಿತು ಯುವ ಪೀಳಿಗೆಗೆ ಅರ್ಥವಾಗಲೆಂದೇ ಅವರ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚಿಸಲು ಇಂಧಿರಾ ಗಾಂಧಿ ನಿರ್ಧರಿಸಿದ್ದರು. ಅದನ್ನು ಕಾರ್ಯರೂಪಕ್ಕೆ ತಂದವರು ರಾಜೀವ ಗಾಂಧಿ ಎಂದು ಹೇಳಿದರು.
ನಮ್ಮ ಮೂಲ ಜ್ಞಾನವು ಮರೆಯಾಗುತ್ತಿದೆ. ಭಾರತ ನಾಶವಾದರೆ ವಿಶ್ವವೇ ನಾಶವಾಗುತ್ತದೆ ಎಂಬುದು ವಿದೇಶಿ ಪಂಡಿತರಿಗೆ ಅರಿವಾಗಿದೆ. ಆದರೆ, ಭಾರತೀಯರಾದ ನಮಗೆ ನಮ್ಮಲ್ಲಿನ ಯಾವುದೇ ಕೌಶಲ್ಯವನ್ನು ಉಳಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ರವೀಂದ್ರನಾಥ್​ ಟಾಗೋರ್​, ಸ್ವಾಮಿ ವಿವೇಕಾನಂದ ಅವರ ಕೌಶಲ್ಯವು ಪಲಾಯನ ಮಾಡಿತು. ಯುವಶಕ್ತಿಯೇ ದೇಶದ ಮೂಲ ಸಂಪತ್ತಾಗಿದೆ. ಈ ದೇಶದ ಭವಿಷ್ಯ ಈ ದೇಶದ ಶಾಲಾ ಕೊಠಡಿಯಲ್ಲಿ ನಿರ್ಮಾಣ ಆಗುತ್ತದೆ. ಅದಕ್ಕಾಗಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದು ನಿರ್ಭಯಾನಂದ ಶ್ರೀಗಳು ಹೇಳಿದರು.
ಗಭಿರ್ಣಿಯಾದ ಮಹಿಳೆಗೆ ಹೆರಿಗೆ ಆಗುವವರೆಗೂ ಹೇಗೆ ಬದುಕಬೇಕು ಎಂಬುದರ ಕುರಿತು ಒಂದು ವೈಜ್ಞಾನಿಕ ವಿಷಯವೇ ಇದೆ. ಈ ವಿಷಯವನ್ನು ಹೆಣ್ಣುಮಕ್ಕಳಿಗೆ ಮಹಿಳಾ ಮಕ್ಕಳ ಕಲ್ಯಾಣಯಿಂದ ತಿಳಿಹೇಳುವ ಕೆಲಸವಾಗಬೇಕು. ಜನಿಸು ಮಕ್ಕಳು ನೈತಿಕ ದಾರಿಯಲ್ಲಿ ಬೆಳೆಯುತ್ತಾರೆ. ಇದು ವೈಜ್ಞಾನಿಕವಾಗಿ ಸಾಭಿತಾಗಿದೆ. ಇದನ್ನೇ ಪುರಾತನ ಸಂಸತಿಯಲ್ಲಿ ಭಾರತೀಯರು ಅಳವಡಿಸಿಕೊಂಡಿದ್ದ ಎಂದು ಶ್ರೀಗಳು ಹೇಳಿದರು.
ಸಚಿವ ಎಚ್​.ಕೆ. ಪಾಟೀಲ ಮಾತನಾಡಿ, ದೇಶವೇ ಮೊದಲಾಗಬೇಕು. ದೇಶ ಎಂದು ಬಂದಾಗ ಮಸೀದಿ, ಚರ್ಚ್​, ದೇವಸ್ಥಾನ ಬದಿಗೊತ್ತಿ ಐಕ್ಯತೆ ಮೆರೆಯಬೇಕು ಎಂಬುದು ಸ್ವಾಮೀ ವಿವೇಕಾನಂದರ ಸಂದೇಶವಾಗಿತ್ತು. ವಾಲ್ಮೀಕಿ ಅವರು ತಮ್ಮ ಸಾಹಿತ್ಯದ ಮೂಲಕ ಶ್ರೀರಾಮನನ್ನು ಪ್ರಸಿದ್ದಿ ಪಡೆಸಿದರು. ನಾವು ಜಾತಿಯಿಂದ ಯಾರನ್ನು ಅಳೆಯಬಾರದು. ಈ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಬಾಂಧವರು ಉಪಸ್ಥಿತಿರಾಗಿದ್ದು, ದೇಶಕ್ಕಾಗಿ ಒಂದಾಗಿದ್ದೇವೆ ವಿನಹ ಜಾತಿ, ಮತ ಪಂಥಕ್ಕಾಗಿ ಅಲ್ಲ. ವಿವೇಕಾನಂದರು ಇದನ್ನೇ ಬಯಸಿದ್ದರು. ದ್ವೇಷವನ್ನು ಅಳಿಸಿ ಪ್ರೀತಿಯನ್ನು ಬೆಳೆಸಬೇಕು ಎಂದು ಸಚಿವರು ಹೇಳಿದರು.
ಶಾಲಾ ಮಕ್ಕಳಿಗೆ ವಿವೇಕಾನಂದರ ಆದರ್ಶಗುಣಗಳನ್ನು ತಿಳಿಸುವ ಕೆಲಸವಾಗಬೇಕು. ಸಮಾಜದ ಬಗ್ಗೆ ಚಿಂತನೆ ಮಾಡುವುದರ ಜೊತೆಗೆ ವಿವೇಕಾನಂದರ ಗುಣಗಳಾದ ದೇಶದ ರಕ್ಷಣೆ ಸಹನೆ, ಔದಾರ್ಯ, ತಾಳ್ಮೆ ಇವುಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು. ವಿವೇಕಾನಂದರು ಹೇಳಿದಂತೆ ಯುವಕರು ತಮ್ಮ ಏಳಿಗೆಗೆ ತಾವೇ ಶಿಲ್ಪಿಗಳಾಗಿರುತ್ತಾರೆ. ಗದಗ ಜಿಲ್ಲೆಯು ವಿವೇಕಾನಂದರ ಸಂದೇಶಗಳನ್ನು ವಿಶ್ವಕ್ಕೆ ಬಿತ್ತರಿಸುವ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಇಂದಿನ ಯುವಕರು ಖಿನ್ನತೆಗೊಳಗಾಗದೇ ಸಮಯ ವ್ಯರ್ಥ ಮಾಡದೇ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ಸಚಿವ ಎಚ್​. ಕೆ. ಪಾಟೀಲ ಹೇಳಿದರು.


ಕೆವಿಎಸ್​ಆರ್​ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಉಪನ್ಯಾಸ ನೀಡಿ, ಇಂದಿನ ಯುವಕರು ಜ್ಞಾನಾರ್ಜನೆ ಮಾಡಿ ಸಹನೆಯಿಂದ ಕೆಲಸ ನಿರ್ವಹಿಸಿದರೆ ಗುರಿ ಮುಟ್ಟಲು ಸಾಧ್ಯ. ಭವ್ಯ ಭಾರತ ಕಟ್ಟುವಲ್ಲಿ ವಿದ್ಯಾಥಿರ್ಗಳು ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು. ನಮ್ಮ ದೇಶದ ಸಂಸತಿಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರು ಯಾವ ವ್ಯಕ್ತಿಯೂ ತನ್ನ ಆತ್ಮ ಗೌರವವನ್ನು ಕಳೆದುಕೊಳ್ಳಬಾರದು. ಹಾಗೂ ಯಾರ ಆತ್ಮ ಗೌರವವನ್ನು ಕಳೆಯುವ ಕೆಲಸ ಮಾಡಬಾರದು ಎಂದು ಸಂದೇಶ ನೀಡಿದ್ದಾರೆ ಎಂದು ವಿವರಿಸಿದರು.

ಪ್ರೌಢಶಾಲಾ ವಿಭಾಗದ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿರ್ಗಳಿಗೆ ಬಹುಮಾನ ವಿತರಿಸಲಾಯಿತು.

ಹುಲಕೋಟಿ- ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಟಾನದ ಅಧ್ಯಕ್ಷರಾದ ಪುನೀತ್​ ಮಹಾರಾಜರು ಮಾತನಾಡಿದರು. ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್​, ಜಿಲ್ಲಾ ಪೊಲೀಸ್​ ವರಿಷ್ಟಾದಿಕಾರಿ ಬಿ. ಎಸ್​.ನೇಮಗೌಡ, ಮಾಜಿ ಶಾಸಕ ಡಿ. ಆರ್​. ಪಾಟೀಲ, ಗುರಣ್ಣ ಬಳಗಾನೂರ, ಬಸವರಾಜ ಕಟ್ಟಿಮನಿ, ಬಿ. ಬಿ. ಅಸೂಟಿ, ಪ್ರಭು ಬುರಬುರೆ, ಪೀರಸಾಬ ಕೌತಾಳ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net