ಅಂಬೇಡ್ಕರ್ ಪ್ರತಿಮೆ ಶೀಘ್ರ ಲೋಕಾರ್ಪಣೆಗೆ ಒತ್ತಾಯ

dc office protest
Published on

ವಿಜಯವಾಣಿ ಸುದ್ದಿಜಾಲ ಬೆಂ. ಗ್ರಾಮಾಂತರ
ಜಿಲ್ಲಾಡಳಿತ ಭವನ ಆವರಣದಲ್ಲಿ ಅಂಬೇಡ್ಕರ್ ಅವರ ಲೋಹದ ಪ್ರತಿಮೆ ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆ ಮಾಡಬೇಕು ಎಂದು ಪ್ರಜಾ ವಿಮೋಚನಾ ಚಳುವಳಿ ಪಿವಿಸಿ ಸ್ವಾಭಿಮಾನದ ಅಧ್ಯಕ್ಷ ಅಮರೇಶ್ ಒತ್ತಾಯಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನ ಆವರಣದಲ್ಲಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಧಿಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಳಂಭವಾಗುತ್ತಿದೆ. ರಾಜ್ಯ ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲಾಡಳಿತ ಭವನದ ಮುಂಭಾಗ ಸಂವಿಧಾನ ಶಿಲ್ಪಿಯ ಲೋಹದ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ರಾಜ್ಯ ಸಮಿತಿ 2019ರಲ್ಲಿ ರಾಜ್ಯ ಸರ್ಕಾರದಿಂದ ಪೂರ್ವ ಅನುಮತಿ ಪಡೆದುಕೊಂಡಿತ್ತು. 2018 -19ನೇ ಸಾಲಿನಿಂದಲೂ ಅಂಬೇಡ್ಕರ್ ಲೋಹದ ಪ್ರತಿಮೆ ಪ್ರತಿಷ್ಠಾಪನೆಗಾಗಿ ಹಕ್ಕೊತ್ತಾಯ ಮಂಡಿಸಿ ಅಂದಿನಿಂದ ಈವರೆಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಲವು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದರೂ ಕಾರ್ಯಾನುಷ್ಠಾನವಾಗುತ್ತಿಲ್ಲ. ಶೀಘ್ರ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಶಾಖೆಯ ಅಧ್ಯಕ್ಷ ಸೋಲೂರು ನಾಗರಾಜ್ ಮಾತನಾಡಿ, ಮಾಜಿ ಮಂತ್ರಿ ಆರ್.ಅಶೋಕ್ 2021ರಲ್ಲಿ ಭೂಮಿಪೂಜೆ ನೆರವೇರಿಸಿದ್ದು, ಈವರೆಗೂ ಪ್ರತಿಮೆ ಸ್ಥಾಪನೆ ಕಾರ್ಯ ನಡೆಯದಿರುವುದು ದುರದೃಷ್ಟಕರ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net